ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಿಂದ ಮಾಯವಾಗಿದ್ದ ಹಿರಿಯ ನಟಿ ಮಹಾಲಕ್ಷ್ಮೀ ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ಅವಕಾಶ ದೊರೆತರೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕೂಡಾ ಹೇಳಿದ್ದರು. ಇದೀಗ ಅವರು ಹೇಳಿದಂತೆ ಮಹಾಲಕ್ಷ್ಮಿ ಮತ್ತೆ ಸ್ಯಾಂಡಲ್ವುಡ್ಗೆ ಬಂದಿದ್ದಾರೆ. ಅದೂ ಕೂಡಾ ಟಿಆರ್ಪಿ ರಾಮನ ತಾಯಿ ಆಗಿ.
'ಟಿಆರ್ಪಿ ರಾಮ' ಚಿತ್ರದ ಮುಹೂರ್ತ ಗುರುವಾರ ಹನುಮಂತ ನಗರದ ಶ್ರೀರಾಮಾಂಜನೇಯ ಗುಡ್ಡದಲ್ಲಿ ನೆರವೇರಿದೆ. ಈ ಮುಹೂರ್ತ ಸಮಾರಂಭದಲ್ಲಿ ಮಹಾಲಕ್ಷ್ಮಿ ಕೂಡಾ ಹಾಜರಿದ್ದರು. ಸಂಪೂರ್ಣ ಹೊಸಬರೇ ಮಾಡುತ್ತಿರುವ ಈ ಚಿತ್ರದಲ್ಲಿ ಮಹಾಲಕ್ಷ್ಮಿ ಒಬ್ಬರೇ ಹಳಬರು ಮತ್ತು ಹಿರಿಯರು. ಆದರೆ ಸುಮಾರು 30 ವರ್ಷಗಳಿಂದ ಆ್ಯಕ್ಟಿಂಗ್ನಿಂದ ದೂರ ಇದ್ದಿದ್ದರಿಂದ ಮತ್ತೆ ಸಹಜ ಸ್ಥಿತಿಗೆ ಬರಲು ಹೆಚ್ಚಿನ ಸಮಯ ಬೇಕಾಗಬಹುದು. ಈ ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕನ ತಾಯಿಯ ಪಾತ್ರ ಮಾಡುತ್ತಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಷ್ಟು ದಿನಗಳು ಚಿತ್ರರಂಗದತ್ತ ಬರದಿರಲು ಕಾರಣಗಳನ್ನು ಹೇಳಿಕೊಂಡರು.