ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಅಂದರೆ ದಿವಂಗತ ಪುಟ್ಟಣ್ಣ ಕಣಗಾಲ್. ಚಿತ್ರತಂಡದ ಪ್ರತಿ ಸದಸ್ಯರನ್ನೂ ಪ್ರೀತಿಯಿಂದ ಕಾಣುತ್ತಾ, ಪ್ರೋತ್ಸಾಹ ನೀಡುತ್ತಿದ್ದ ಏಕೈಕ ನಿರ್ದೇಶಕ ಅಂದರೆ ಅದು ಪುಟ್ಟಣ್ಣ ಕಣಗಾಲ್.
ಪುಟ್ಟಣ್ಣ ಕಣಗಾಲ್ ಸಿನಿಮಾ ಪ್ರೀತಿ ಬಗ್ಗೆ ಹಿರಿಯ ನಟಿ ಜಯಂತಿ ಮಾತು 1976ರಲ್ಲಿ ಐದು ಬೇರೆ ಬೇರೆ ಕಥೆಗಳನ್ನು ಒಟ್ಟುಗೂಡಿಸಿ, ಪುಟ್ಟಣ್ಣ ಕಣಗಾಲ್ 'ಕಥಾಸಂಗಮ' ಎಂಬ ಸಿನಿಮಾ ಮಾಡಿದ್ದರು. ಇದೀಗ ನಿರ್ದೇಶಕ, ನಟ ರಿಷಭ್ ಶೆಟ್ಟಿ ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಈಗಾಗಲೇ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಹೊಸತನಕ್ಕೆ ಸಾಕ್ಷಿಯಾಗಿದೆ. ಈಗ ಚಿತ್ರದ ಬಗ್ಗೆ ಅಭಿನಯ ಶಾರದೆ ಜಯಂತಿ ಕೂಡಾ ಮಾತನಾಡಿದ್ದಾರೆ. ಅದರಲ್ಲೂ ನಿರ್ದೇಶಕ ಪುಟ್ಟಣ್ಣ ಕಣಗಾಲ್ಗೆ ಸಿನಿಮಾ ಬಗ್ಗೆ ಇದ್ದ ಕ್ರೇಜ್ ಬಗ್ಗೆ ಜಯಂತಿ ಮಾತನಾಡಿದ್ದಾರೆ.
'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಹಾಡೊಂದನ್ನು ಬರೋಬ್ಬರಿ 7 ದಿನಗಳ ಕಾಲ ಪುಟ್ಟಣ್ಣ ಕಣಗಾಲ್ ಚಿತ್ರೀಕರಣ ಮಾಡಿದ್ದರಂತೆ. ಇನ್ನು ಪ್ರತಿಯೊಂದು ಪಾತ್ರಕ್ಕೂ ಪುಟ್ಟಣ್ಣ ಕಣಗಾಲ್ ಇಡುತ್ತಿದ್ದ ಒಂದೊಂದು ಫ್ರೇಮ್ ಅದ್ಭುತವಾಗಿ ಇರುತ್ತಿತ್ತು. ಏನೇ ಕೆಲಸ ಮಾಡುವಾಗಲೂ ಸಾಕಷ್ಟು ಬಾರಿ ಯೋಚಿಸಿ ಮಾಡುತ್ತಿದ್ದರು. ಎಂದು ಹೇಳುವ ಮೂಲಕ ಸಿನಿಮಾ ಮೇಲೆ ಅವರಿಗಿದ್ದ ವ್ಯಾಮೋಹದ ಬಗ್ಗೆ ಜಯಂತಿ ಮಾತನಾಡಿದ್ದಾರೆ. ಜೊತೆಗೆ ರಿಷಭ್ ಶೆಟ್ಟಿ 'ಕಥಾಸಂಗಮ' ಸಿನಿಮಾಗೆ ವಿಶ್ ಮಾಡಿದ್ದಾರೆ.
ಈ 'ಕಥಾಸಂಗಮ'ದಲ್ಲಿ ಏಳು ಕಥೆಗಳು, ಏಳು ಸಂಗೀತ ನಿರ್ದೇಶಕರು, ಏಳು ಛಾಯಾಗ್ರಾಹಕರು. ಏಳು ಮಂದಿ ನಿರ್ದೇಶಕರು ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಕರಣ್ ಅನಂತ್, ಸುಮಂತ್ ಭಟ್, ರಾಹುಲ್ ಪಿ.ಕೆ. ಶಶಿಕುಮಾರ್, ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ ಹೀಗೆ ಏಳು ಜನ ಯುವ ನಿರ್ದೇಶಕರಿದ್ದಾರೆ. ಈ ಏಳೂ ಭಾಗಗಳಿಗೂ ರಿಷಭ್ ಶೆಟ್ಟಿ, ಫೈನಲ್ ಟಚ್ ಕೊಟ್ಟಿದ್ದಾರೆ. ಸದ್ಯಕ್ಕೆ 'ಕಥಾಸಂಗಮ' ಒಂದಲ್ಲಾ ಒಂದು ವಿಷಯಕ್ಕೆ ಸದ್ದು ಮಾಡುತ್ತಿದೆ. ಸಿನಿಮಾ ನೋಡಲು ಕೂಡಾ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.