ಸ್ಯಾಂಡಲ್ವುಡ್ನಲ್ಲಿ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಇದೀಗ ಆ ಕೊರತೆಯನ್ನು ನೀಗಿಸಲು 'ನನ್ನ ಕನಸುಗಳು' ಎಂಬ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ಹಿರಿಯ ನಟಿ ಗಿರಿಜಾ ಲೋಕೇಶ್ ಆಗಮಿಸಿ ಇಡೀ ತಂಡಕ್ಕೆ ಶುಭ ಹಾರೈಸಿದರು.
ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ 'ನನ್ನ ಕನಸುಗಳು' ಸಿನಿಮಾಗೆ ರಾಜು ನಿರ್ದೇಶನ ಮಾಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿರ್ಮಾಪಕಿ ಸುಜಾತಾ ಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಮೊದಲಿಗೆ ಮಾಹಿತಿ ನೀಡಿದ ನಿರ್ದೇಶಕ ರಾಜು, ಇದೊಂದು ಸಂಪೂರ್ಣ ಮಕ್ಕಳ ಸಿನಿಮಾ. ಈ ಚಿತ್ರದಲ್ಲಿ ಭ್ರೂಣ ಹತ್ಯೆ, ಹೆಣ್ಣಿಗೂ ಶಿಕ್ಷಣ ಕಡ್ಡಾಯ, ಹಳ್ಳಿಗಳಲ್ಲಿ ಪ್ರತಿ ಮನೆಗೂ ಶೌಚಾಲಯ ಅದೇ ರೀತಿ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಿದ್ದೇವೆ. ಪರಿಸರ ಸಂರಕ್ಷಣೆ ಬಗ್ಗೆಯೂ ಸಿನಿಮಾ ಮಾತನಾಡಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ವಿಷಯಗಳನ್ನು ತಿಳಿಸಿದ್ದೇವೆ ಎಂದರು. ಚಿತ್ರದ ನಿರ್ಮಾಪಕಿ ಸುಜಾತಾ ಸಿಂಗ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಕನಸು ಕಾಣಲು ಕೂಡಾ ಪೋಷಕರು ಬಿಡುತ್ತಿಲ್ಲ. ಮಕ್ಕಳು ಹೆಚ್ಚು ಹೆಚ್ಚು ಕನಸು ಕಾಣಬೇಕು. ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರಲಿದ್ದೇವೆ ಎಂದರು.