ಬೆಳ್ಳಿತೆರೆ, ಕಿರುತೆರೆಯ ಹಿರಿಯ ನಟಿ ಬಿ.ಜಯಾ (75) ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಇತ್ತೀಚೆಗೆ ಪಾರ್ಶ್ವವಾಯು ಪೀಡಿತರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಇಂದು ಇಹಲೋಕ ತ್ಯಜಿಸಿದರು.
ಕನ್ನಡ ಸಿನಿ ಜಗತ್ತಿನ ಮೊದಲ ತಲೆಮಾರಿನ ಖ್ಯಾತ ಹಾಸ್ಯ ನಟಿ. ನರಸಿಂಹರಾಜು, ಬಾಲಕೃಷ್ಣ ಮತ್ತು ದ್ವಾರಕೀಶ್ ಜೊತೆಗಿನ ಇವರ ನಟನೆ ಅಭಿಮಾನಳಿಗೆ ಈಗಲೂ ಅಚ್ಚುಮೆಚ್ಚು. ಅಷ್ಟೇ ಅಲ್ಲ ಮೂರು ತಲೆಮಾರಿನ ನಟ, ನಟಿಯರ ಜೊತೆ ನಟಿಸಿದವರು ಇವರು. 350ಕ್ಕೂ ಹೆಚ್ಚು ಚಿತ್ರಗಳು, ಹಲವು ಧಾರಾವಾಹಿಗಳ ಸಾವಿರಾರು ಸಂಚಿಕೆಗಳಲ್ಲಿ ಅಭಿನಯಿಸಿರುವ ಖ್ಯಾತಿ ಇವರದ್ದು.
ಜಯಾ ಅವರ ತಂದೆ ಬಸಪ್ಪ ಅವರು ಕೂಡ ರಂಗಭೂಮಿ ಕಲಾವಿದರು. ಅಪ್ಪನ ಆಸೆಯಂತೆ ಜಯಾ ಅವರು ತಮ್ಮ 10ನೇ ವಯಸ್ಸಿಗೇ ಬಣ್ಣ ಹಚ್ಚಲು ಆರಂಭಿಸಿದರು. ರಂಗಭೂಮಿಯಲ್ಲಿ ಸಾಕಷ್ಟು ಪಾತ್ರಗಳ ಮಾಡಿ ಸೈ ಎನಿಸಿಕೊಂಡರು.
ಬಳಿಕ 1958ರಲ್ಲಿ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ನೀಡಿದರು. ಬಳಿಕ ಹಲವು ಸಿನಿಮಾ ಮಾಡಿ ಹೆಸರುವಾಸಿಯಾದರು. ರಂಗಭೂಮಿ ಮೂಲದ ಜಯಾ 1983ರಲ್ಲಿ ಕುಮಾರೇಶ್ವರ ನಾಟಕ ಸಂಘ ಕಟ್ಟಿ, 1992ರವರೆಗೆ ಯಶಸ್ವಿಯಾಗಿ ಕಂಪನಿ ನಡೆಸಿದರು.
ಮಹದೇಶ್ವರ ಪೂಜಾಫಲ, ಚಿನ್ನದ ಗೊಂಬೆ, ದೈವಲೀಲೆ, ವಿಧಿ ವಿಲಾಸ, ಮಣ್ಣಿನ ಮಗ, ಬೆಳ್ಳಿಮೋಡ, ನ್ಯಾಯವೇ ದೇವರು, ಪ್ರತಿಜ್ಞೆ, ಶ್ರೀಕೃಷ್ಣ ದೇವರಾಯ, ಕುಲಗೌರವ, ನಗುವ ಹೂವು, ಮುಕ್ತಿ, ಜೀವನ ಜೋಕಾಲಿ, ಪೂರ್ಣಿಮಾ, ದೇವರು ಕೊಟ್ಟ ತಂಗಿ, ಗಂಧದ ಗುಡಿ,ದಾರಿತಪ್ಪಿದ ಮಗ, ಪ್ರೇಮದ ಕಾಣಿಕೆ, ಶುಭಮಂಗಳ ಜಯಾ ಅವರ ಕೆಲವು ಪ್ರಮುಖ ಚಿತ್ರಗಳು.
'ಮಹಾನ್ ಮರೆಗುಳಿಗಳು' ಸರಣಿಯಿಂದ ಇವರ ಕಿರುತೆರೆ ನಂಟು ಆರಂಭವಾಗಿತ್ತು. 'ಗೌಡ್ರು' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ (2012), ಚಿತ್ರಪ್ರೇಮಿಗಳ ಸಂಘ, ಕನ್ನಡ ಟೆಲಿವಿಷನ್ ಅಸೋಸಿಯೇಷನ್ ಗೌರವ ಸೇರಿದಂತೆ ಹತ್ತಾರು ಪುರಸ್ಕಾರಗಳಿಗೆ ಜಯಾ ಭಾಜನರಾಗಿದ್ದಾರೆ.