ಈಗ 'ಓಲ್ಡ್ ಮಾಂಕ್' ಚಿತ್ರಕ್ಕೆ ಹಿರಿಯ ನಟ ಸಿಹಿಕಹಿ ಚಂದ್ರು ಅವರ ಆಗಮನವಾಗಿದೆ. ಸೆಪ್ಟೆಂಬರ್ 10 ರಿಂದ ಆರಂಭವಾಗಿದೆ. ಕೋವಿಡ್ 19 ಮುನ್ನೆಚರಿಕೆ ವಹಿಸಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರೀಕರಣದ ಸ್ಥಳದಲ್ಲಿ ಸ್ಯಾನಿಟೈಜರ್, ಮಾಸ್ಕ್, ಥರ್ಮೋ ಮೀಟರ್ಗಳನ್ನು ಬಳಸಲಾಗುತ್ತಿದೆ. ಇದರೊಂದಿಗೆ ಸಾಮಾಜಿಕ ಅಂತರ ಕೂಡಾ ಕಾಯ್ದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಶ್ರೀನಿ.
' ಓಲ್ಡ್ ಮಾಂಕ್' ಚಿತ್ರತಂಡ ಸೇರಿದ ಹಿರಿಯ ನಟ ಸಿಹಿಕಹಿ ಚಂದ್ರು
ನಮ್ಮ ಚಿತ್ರದಲ್ಲಿ ಏನಾದರೂ ವಿಶೇಷತೆ ಇರಬೇಕು, ವಿಭಿನ್ನವಾಗಿರಬೇಕು ಎಂದು ಹಠ ತೊಟ್ಟಿರುವ ನಟ, ನಿರ್ದೇಶಕ, ಮಾಜಿ ರೆಡಿಯೋ ಜಾಕಿ ಎಂ.ಜಿ. ಶ್ರೀನಿವಾಸ್ ತಮ್ಮ 'ಓಲ್ಡ್ ಮಾಂಕ್' ಚಿತ್ರಕ್ಕೆ 18 ಹಿರಿಯ ಜೋಡಿಗಳನ್ನು ಕರೆತರುತ್ತೇನೆ ಎಂದು ಹೇಳಿದ್ದರು. ಇದಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಡಿಷನ್ ಕೂಡಾ ನಡೆಸಿದ್ದಾರಂತೆ.
ಶ್ರೀನಿ ಜೊತೆ ಅದಿತಿ ಪ್ರಭುದೇವ, ಸುಜೈ ಶಾಸ್ತ್ರಿ, ಕಲಾ ಸಾಮ್ರಾಟ್ ಎಸ್. ನಾರಾಯಣ್, ಅರುಣ ಬಾಲರಾಜ್ ಚಿತ್ರತಂಡದಲ್ಲಿದ್ದಾರೆ. ಸಿಹಿಕಹಿ ಚಂದ್ರು ಸೆಟ್ಗೆ ಬಂದ ನಂತರ ಉತ್ಸಾಹ ಇನ್ನೂ ಹೆಚ್ಚಾಗಿದೆಯಂತೆ. ಶ್ರೀನಿ ಈ ಹಿಂದೆ ನಿರ್ಮಿಸಿದ 'ಟಿಪಿಕಲ್ ಕೈಲಾಸಂ' ಕಿರುಚಿತ್ರಕ್ಕೆ ಪ್ರಶಸ್ತಿ ಪಡೆದಿದ್ದರು. ನಂತರ ಸೂಪರ್ ಸ್ಟಾರ್ ಉಪೇಂದ್ರ ಅವರ 'ಟೋಪಿವಾಲ' ಸಿನಿಮಾದಿಂದ ನಿರ್ದೇಶಕರಾದರು. ನಂತರ 'ಶ್ರೀನಿವಾಸ ಕಲ್ಯಾಣ' ಚಿತ್ರದಿಂದ ನಟನೆ ಹಾಗೂ ನಿರ್ದೇಶನ ಕೂಡಾ ಆರಂಭಿಸಿದರು. 'ಬೀರಬಲ್', 'ಫೈಂಡಿಂಗ್ ವಜ್ರಮುನಿ' ಶ್ರೀನಿಯವರ ಯಶಸ್ವಿ ಚಿತ್ರಗಳು. ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರದಲ್ಲಿ ಕೂಡಾ ಶ್ರೀನಿ ಗಮನಾರ್ಹ ಪಾತ್ರ ಮಾಡಿದ್ದರು.
‘ಓಲ್ಡ್ ಮಾಂಕ್’ ಚಿತ್ರದಲ್ಲಿ ಸ್ವರ್ಗಲೋಕದಿಂದ ಭೂಲೋಕಕ್ಕೆ ಬರುವ ವ್ಯಕ್ತಿಯ ಪಾತ್ರದಲ್ಲಿ ಶ್ರೀನಿಅಭಿನಯಿಸುತ್ತಿದ್ದಾರೆ. ಸ್ವರ್ಗ ಲೋಕದಿಂದ ಬರುವ ವ್ಯಕ್ತಿಗೆ ಭೂಮಿಯಲ್ಲಿ ಏನೆಲ್ಲಾ ಪರಿಸ್ಥಿತಿಗಳು ಎದುರಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಹಾಸ್ಯಮಿಶ್ರಿತವಾಗಿ ಹೇಳಲಾಗಿದೆ. ಪ್ರದೀಪ್ ಶರ್ಮ ನಿರ್ಮಾಣದ ಈ ಚಿತ್ರವನ್ನು ಶ್ರೀನಿ ನಿರ್ದೇಶಿಸುತ್ತಿದ್ದಾರೆ.