ಸಿನಿಮಾ ನಟರು ಎಂದರೆ ಸಾಕು ಅವರು ಸಿರಿವಂತರು ಎಂಬ ತಪ್ಪು ಕಲ್ಪನೆ ಇದೆ. ಆದರೆ, ಬಹುತೇಕ ಕಲಾವಿದರು ಹಲವು ವರ್ಷಗಳಿಂದ ಸಿನಿಮಾ, ಕಿರುತೆರೆಗಳಲ್ಲಿ ನಟಿಸಿದರೂ ಅವರಿಗೆ ಹೇಳಿಕೊಳ್ಳುವಂತ ಸಂಪಾದನೆ ಇರುವುದಿಲ್ಲ. ನಾನೂ ಕೂಡಾ ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳಿಂದ ಕೆಲಸ ಮಾಡಿದರೂ ಸಿರಿವಂತನಲ್ಲ ಎಂದು ನಟ ರಮೇಶ್ ಪಂಡಿತ್ ಹೇಳಿದ್ದಾರೆ.
ಮೂರು ದಶಕ ಕಳೆದರೂ ನನ್ನ ಸಂಭಾವನೆ ಸಾವಿರ ಲೆಕ್ಕದಲ್ಲಿದೆ: ರಮೇಶ್ ಪಂಡಿತ್ - ನಿಗೂಢ ರಹಸ್ಯ
ಹಿರಿಯ ನಟ ರಮೇಶ್ ಪಂಡಿತ್ ಸುಮಾರು ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ನಾನು ಹೆಚ್ಚು ಹಣ ಸಂಪಾದಿಸಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ಅವಕಾಶಗಳು ಕಡಿಮೆಯಾಗುತ್ತಿದ್ದು, ಇದುವರೆಗೂ ಒಂದು ಬಾರಿ ಕೂಡಾ ಲಕ್ಷ ಲೆಕ್ಕದಲ್ಲಿ ಸಂಭಾವನೆ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ, ರಂಗಭೂಮಿ, ಕಿರುತೆರೆಯಲ್ಲಿ ಜನಪ್ರಿಯ ಆಗಿರುವ ಹಿರಿಯ ನಟ ರಮೇಶ್ ಪಂಡಿತ್ ಸುಮಾರು ಮೂರು ದಶಗಳಿಂದಲೂ ಕಲಾಸೇವೆ ಮಾಡಿಕೊಂಡು ಬಂದಿದ್ದಾರೆ. ಮೂರು ದಶಕ ಕಳೆದರೂ ನನ್ನ ಜೀವನ ‘ಹ್ಯಾಂಡ್ ಟು ಮೌತ್’ ಗಳಿಕೆ ಅಷ್ಟೇ. ನಾನೇನು ಸಿರಿವಂತನಲ್ಲ. ಸುಮಾರು 200 ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದರಲ್ಲಿ ಬಹುತೇಕ ಸಿನಿಮಾಗಳಿಗೆ ಮಾತನಾಡಿದಷ್ಟು ಸಂಭಾವನೆ ಸಿಕ್ಕಿಲ್ಲ. ಸ್ವಲ್ಪ ಕೊಟ್ಟು ಸ್ವಲ್ಪ ಉಳಿಸಿಕೊಳ್ಳುವವರೇ ಹೆಚ್ಚು. ಇಷ್ಟು ವರ್ಷಗಳಾದರೂ ಲಕ್ಷ ಹೆಸರಿನಲ್ಲಿ ಎಂದಿಗೂ ಸಂಭಾವನೆ ಪಡೆದಿಲ್ಲ. ನನ್ನದೇನಿದ್ದರೂ ಸಾವಿರ ಲೆಕ್ಕದಲ್ಲಿ ಸಂಭಾವನೆ ಅಷ್ಟೇ. ನನ್ನ ಪತ್ನಿ ಸುನೇತ್ರಾ ಪಂಡಿತ್ ಕೂಡಾ ನಟಿಯೇ. ನನ್ನ ಮಗಳಿಗೆ ನಟನೆ ಇಷ್ಟ ಇಲ್ಲ. ರಂಗಭೂಮಿಯ ತೆರೆ ಹಿಂದಿನ ಕೆಲಸಗಳನ್ನು ಇಷ್ಟ ಪಡುತ್ತಾಳೆ. ಕಂಪನಿಯೊಂದರಲ್ಲಿ ಕೂಡಾ ದುಡಿಯುತ್ತಿದ್ದಾಳೆ ಎನ್ನುತ್ತಾರೆ ರಮೇಶ್ ಪಂಡಿತ್.
ರಮೇಶ್ ಪಂಡಿತ್ ಹೇಳುವ ಪ್ರಕಾರ ಅವರಿಗೆ ಈಗ ಅವಕಾಶಗಳು ಕಡಿಮೆ ಆಗುತ್ತಿದೆಯಂತೆ. ಹಳಬರನ್ನು ಬಳಸಿಕೊಳ್ಳಲು ಯಾರೂ ಹೆಚ್ಚಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ನಾನು ಈಗಲೂ ರಂಗಭೂಮಿಯನ್ನು ಬಿಟ್ಟಿಲ್ಲ. ಬಿ. ಜಯಶ್ರೀ ಅವರ ತಂಡದಲ್ಲಿ ಇದ್ದೇನೆ. ಸಿನಿಮಾ ಮಂದಿಗೆ ನಮ್ಮಂಥವರು ನೆನಪಿಗೆ ಬರುವುದು ಅಪರೂಪ ಎಂದು ಹೇಳುವ ರಮೇಶ್ 1990 ರಲ್ಲಿ ಬಿಡುಗಡೆಯಾದ ‘ನಿಗೂಢ ರಹಸ್ಯ’ ಚಿತ್ರದಿಂದ ನಟನೆಗೆ ಕಾಲಿಟ್ಟರು. ನಂತರ ಉಲ್ಟಾಪಲ್ಟಾ, ಅಂಡಮಾನ್, ಮೆಜೆಸ್ಟಿಕ್, ಧರ್ಮ, ಸುಂಟರಗಾಳಿ, ಎನ್ಕೌಂಟರ್ ದಯಾನಾಯಕ್, ನಾನಿ, ಕಿಲ್ಲಿಂಗ್ ವೀರಪ್ಪನ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯ ನಂದಿನಿ, ಮೇಘಮಯೂರಿ, ಮಹಾಭಾರತ ಸೇರಿ ಬಹಳಷ್ಟು ಧಾರಾವಾಹಿಗಳಲ್ಲಿ ಕೂಡಾ ರಮೇಶ್ ಪಂಡಿತ್ ನಟಿಸಿದ್ದಾರೆ.