ನಟರ ಕುಟುಂಬದಿಂದ ಅನೇಕ ಪ್ರತಿಭೆಗಳು ಈಗಾಗಲೇ ಸ್ಯಾಂಡಲ್ವುಡ್ಗೆ ಬಂದಿದ್ದಾರೆ. ಡಾ. ರಾಜ್ಕುಮಾರ್ ಮೊಮ್ಮಕ್ಕಳು ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಮತ್ತೊಬ್ಬ ಖ್ಯಾತ ನಟರೊಬ್ಬರ ಮೊಮ್ಮಕ್ಕಳು ಚಿತ್ರರಂಗಕ್ಕೆ ಬರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹಿರಿಯ ನಟ ಶ್ರೀನಿವಾಸಮೂರ್ತಿ ಕನ್ನಡ ಚಿತ್ರರಂಗದಲ್ಲಿ ಭೋಜರಾಜ ಎಂದೇ ಹೆಸರು ಮಾಡಿದವರು. ಶಾಲೆಯ ದಿನಗಳಲ್ಲೇ ನಾಟಕದಲ್ಲಿ ಆಸಕ್ತಿ ಬೆಳೆಸಿಕೊಂಡು ಆ ವಯಸ್ಸಿನಲ್ಲೇ ಗಣ್ಯರಿಂದ ಮೆಚ್ಚುಗೆ ಪಡೆದವರು. ನಂತರ 'ಹೇಮಾವತಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದ ಅವರು ಸುಮಾರು 40 ಕ್ಕೂ ಹೆಚ್ಚು ವರ್ಷಗಳ ಕಾಲ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ನಿರ್ದೇಶಕ, ನಿರ್ಮಾಪಕ ಆಗಿ ಕೂಡಾ ಶ್ರೀನಿವಾಸಮೂರ್ತಿ ಗುರುತಿಸಿಕೊಂಡಿದ್ದಾರೆ.
ಪುತ್ರ, ಮೊಮ್ಮಗನೊಂದಿಗೆ ಶ್ರೀನಿವಾಸಮೂರ್ತಿ
ಶ್ರೀನಿವಾಸಮೂರ್ತಿ ಮೊದಲ ಪುತ್ರ ನವೀನ್ ಕೃಷ್ಣ ಈಗಾಗಲೇ ಚಿತ್ರರಂಗದಲ್ಲಿ ನಟ, ನಿರ್ದೇಶಕ, ಸಾಹಿತಿ, ಗಾಯಕ, ಸಂಭಾಷಣೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಎರಡನೇ ಪುತ್ರ ನಿಟಿಲ್ ಕೃಷ್ಣ ಕೂಡಾ 'ದೇವರ ಮಕ್ಕಳು' ಚಿತ್ರದಲ್ಲಿ ಬಾಲನಟನಾಗಿ ಗುರುತಿಸಿಕೊಂಡಿದ್ದು ಈಗ ಫ್ಯಾಷನ್ ಪೋಟೋಗ್ರಫಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಶ್ರೀನಿವಾಸಮೂರ್ತಿ ಮೊಮ್ಮಕ್ಕಳು ಹರ್ಷಿತ್ ಹಾಗೂ ಹರುಷ್ ಕೂಡಾ ಬಣ್ಣದ ಲೋಕಕ್ಕೆ ಕಾಲಿಡಲು ರೆಡಿಯಾಗುತ್ತಿದ್ದಾರೆ.
ಹರ್ಷಿತ್ ಹಾಗೂ ಹರುಷ್ ಇಬ್ಬರೂ ನವೀನ್ ಕೃಷ್ಣ ಪುತ್ರರು. 'ನಮ್ದಲ್ಲ ನ್ಯೂಸ್ ಚಾನೆಲ್' ಶೀರ್ಷಿಕೆಯಡಿ ಹಾಸ್ಯಮಿಶ್ರಿತ 4 ಎಪಿಸೋಡ್ಗಳನ್ನು ನವೀನ್ ಕೃಷ್ಣ ನಿರ್ದೇಶನ ಮಾಡಿದ್ದಾರೆ. ಕೊರೊನಾ ಹೇಗೆ ಬಂತು, ನವರಸ, ಕಸ ಹೊಡೆಯೋರು, ಜ್ಯೋತಿಷ್ಯ ಶಿರೋಮಣಿ 1/2 ಎಪಿಸೋಡ್ನಲ್ಲಿ ಮಕ್ಕಳು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ.
ಒಟ್ಟಿನಲ್ಲಿ ಶ್ರೀನಿವಾಸ ಮೂರ್ತಿ ಅವರ ಮೂರನೇ ತಲೆಮಾರು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದು ಸಿನಿಪ್ರಿಯರು ಹಾಗೂ ಸ್ನೇಹಿತರು ಈ ಮಕ್ಕಳಿಗೆ ಶುಭ ಹಾರೈಸಿದ್ದಾರೆ.