ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದ್ರೆ ಗುರಿ ಇರಲೇಬೇಕು. ಅದರಲ್ಲೂ ಬಣ್ಣದ ಲೋಕದಲ್ಲಿ ಸಕ್ಸೆಸ್ ಎಂಬ ಮಾಯಾ ಕುದುರೆ ಬೆನ್ನೇರಬೇಕು ಎಂದರೆ ಶ್ರಮ, ಗುರಿ ಎರಡೂ ಇರಬೇಕು. ಅದೇ ರೀತಿ, ಈಗ ಹೊಸಬರ ತಂಡವೊಂದು ಚಿತ್ರರಂಗದಲ್ಲಿ ಸಾಧಿಸಿಯೇ ತೀರಬೇಕು ಎಂಬ ಅಚಲ ವಿಶ್ವಾಸ ಹಾಗೂ ಗುರಿಯೊಂದಿಗೆ 'ಲಕ್ಷ್ಯ' ಎಂಬ ಚಿತ್ರ ಮಾಡಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ 'ಲಕ್ಷ್ಯ' ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಹಿರಿಯ ನಟ ದೊಡ್ಡಣ್ಣ - ಕಿರುತೆರೆ ನಟ ಸಂತೋಷ್‌ರಾಜ್
ರವಿ ಸಾಸನೂರು ನಿರ್ದೇಶಿಸಿರುವ 'ಲಕ್ಷ್ಯ' ಚಿತ್ರದ ಆಡಿಯೋ ಬಿಡುಗಡೆ ಮಾಡಿರುವ ಹಿರಿಯ ನಟ ದೊಡ್ಡಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಹಿರಿಯ ನಟ ರಾಮಕೃಷ್ಣ, ಸಂತೋಷ್ ರಾಜ್, ನಿತಿನ್ ಹಾಗೂ ಇನ್ನಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿನ್ನೆ 'ಲಕ್ಷ್ಯ' ಚಿತ್ರತಂಡ ಆಡಿಯೋ ಬಿಡುಗಡೆ ಮಾಡಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ಹಾಸ್ಯನಟ ದೊಡ್ಡಣ್ಣ ಹಾಗೂ ಭಾ.ಮಾ ಹರೀಶ್ ಆಗಮಿಸಿ ಚಿತ್ರದ ಆಡಿಯೋ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಯಾರೇ ಆಗಲಿ ಕಷ್ಟಪಟ್ಟು ಗೆಲುವಿನ ದಡ ಸೇರಲೇಬೇಕು ಎಂಬ ಗುರಿ ಇಟ್ಟುಕೊಂಡು ಸಿನಿಮಾ ಮಾಡಿದರೆ ಖಂಡಿತ ಯಶಸ್ವಿಯಾಗ್ತಾರೆ. ಅದೇ ರೀತಿ ಈ ತಂಡ ಗೆಲುವಿನ ಮೇಲೆ 'ಲಕ್ಷ್ಯ' ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಈ ತಂಡಕ್ಕೆ ಒಳ್ಳೆಯದಾಗಲಿ ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ, ಅದರಲ್ಲೂ ಹೊಸಬರ ಚಿತ್ರಗಳ ಮೇಲೆ ನಿಮ್ಮ ಆಶಿರ್ವಾದ ಇರಲಿ, ನಿರ್ಮಾಪಕರಿಗೆ ಲಕ್ಷ ಲಕ್ಷ ಹಣ ಬರಲಿ ಎಂದು ದೊಡ್ಡಣ್ಣ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನು ಈ ಚಿತ್ರಕ್ಕೆ ಈ ಹಿಂದೆ 'ಫಲಿತಾಂಶ' ಎಂಬ ಕಿರುಚಿತ್ರ ನಿರ್ದೇಶಿಸಿದ್ದ ರವಿ ಸಾಸನೂರು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಗುರಿ ಎಂಬ ಅರ್ಥ ಕೊಡುವ 'ಲಕ್ಷ್ಯ' ಸಿನಿಮಾ ಪ್ರೀತಿ, ಅಪ್ಪ-ಅಮ್ಮ, ಕುಟುಂಬ ಹೀಗೆ ಸಮಾಜದಲ್ಲಿ ಪ್ರಚಲಿತದಲ್ಲಿರುವ ಹಲವು ವಿಚಾರಗಳನ್ನು ಒಳಗೊಂಡಿದೆ. ಇದರಲ್ಲಿ ಬರುವ ಒಂದು ಸಣ್ಣ ಎಳೆಯನ್ನು ತೆಗೆದುಕೊಂಡು ಅದಕ್ಕೆ ಕಮರ್ಷಿಯಲ್ ಎಂಬ ಮುದ್ರೆ ಒತ್ತಲಾಗಿದೆ. ಪ್ರತಿಯೊಬ್ಬರ ಬದುಕಿನಲ್ಲಿ ಇವೆಲ್ಲವೂ ಬಂದು ಹೋಗಿರುತ್ತದೆ. ಇಂತಹ ಅಂಶಗಳನಿಟ್ಟುಕೊಂಡು ಈ ಚಿತ್ರ ಮಾಡಿರುವುದಾಗಿ ನಿರ್ದೇಶಕ ರವಿ ಸಾಸನೂರ ತಿಳಿಸಿದರು. ಅಲ್ಲದೆ ಚಿತ್ರದಲ್ಲಿ ನಾಯಕ ನಾಯಕಿ ಎಂಬ ಪಾತ್ರಕ್ಕಿಂತ ಚಿತ್ರದ ಕಥೆಯೇ ಪ್ರಮುಖ ಅಂಶವಾಗಿದೆ ಎಂಬುದು ನಿರ್ದೇಶಕರ ಮಾತು. ಇನ್ನು ಚಿತ್ರದಲ್ಲಿ ದುರಂಹಕಾರಿ, ಧೋರಣೆ ಇರುವ ತಂದೆಯಾಗಿ ಕಿರುತೆರೆ ನಟ ಸಂತೋಷ್‌ರಾಜ್, ಸದಾಕಾಲ ಕುಷೇಷ್ಟೆಯಿಂದ ಇರುವ ನಿತಿನ್ ಹಾಗೂ ರಿಟೈರ್ಡ್ ಶಾಲಾ ಶಿಕ್ಷಕನ ಪಾತ್ರದಲ್ಲಿ ಹಿರಿಯ ಕಲಾವಿದ ರಾಮಕೃಷ್ಣ ನಟಿಸಿದ್ದಾರೆ. ಸಿನಿಮಾದಲ್ಲಿ 4 ಹಾಡುಗಳಿದ್ದು ಜೆಸ್ಸಿಗಿಪ್ಟ್ ಶಿಷ್ಯ ಜುವಿನ್ ಸಿಂಗ್ ಸಂಗೀತ ನೀಡಿದ್ದಾರೆ. ಜೆಸ್ಸಿಗಿಪ್ಟ್ ಒಂದು ಹಾಡು ಕೂಡಾ ಹಾಡಿದ್ದಾರೆ. ಚಿತ್ರವನ್ನು ಗೋಕಾಕ್‌ನ ಮಹಾಂತೇಶ ತಾಂವಶಿ ನಿರ್ಮಾಣ ಮಾಡಿದ್ದು ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.