ಕನ್ನಡದ ವಸಿಷ್ಠ ಸಿಂಹ ಈಗ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಅಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ. ಅದಕ್ಕೆ ಕಾರಣವಾಗಿದ್ದೇನು ಗೊತ್ತಾ? ವೆಂಕಟೇಶ್ ಅಭಿನಯದ 'ನಾರಪ್ಪ'. ಈ ಚಿತ್ರದಲ್ಲಿ ವಸಿಷ್ಠ ನೆಗೆಟಿವ್ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಮಿಂಚಿದ್ದೇ ಮಿಂಚಿದ್ದು, ಅವರನ್ನು ಹಲವರು ಚಿತ್ರಗಳು ಹುಡುಕಿಕೊಂಡು ಬರುತ್ತಿವೆ.
ಹಾಗೆ ನೋಡಿದರೆ, ಅದಕ್ಕಿಂತ ಮುಂಚೆಯೇ ಅವರು 'ಓದೆಲ್ಲ ರೈಲ್ವೇ ಸ್ಟೇಶನ್' ಎಂಬ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದರು. ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಮಧ್ಯೆ, 'ನಾರಪ್ಪ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅದನ್ನು ಅದ್ಭುತವಾಗಿ ಬಳಸಿಕೊಂಡ ವಸಿಷ್ಠ, ಚಿತ್ರದಲ್ಲಿ ತಮ್ಮ ಅಭಿನಯದಿಂದ ಗಮನಸೆಳೆದರು. ಇದರಿಂದಾಗಿ ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ.
ಪ್ರಮುಖವಾಗಿ, ಅವರು 'ಸಿಂಬ' ಎಂಬ ಚಿತ್ರದಲ್ಲಿ ಎಸಿಪಿಯಾಗಿ ನಟಿಸುತ್ತಿದ್ದಾರಂತೆ. ಜಗಪತಿ ಬಾಬು, ಗೌತಮಿ ಮುಂತಾದವರು ತೆರೆಹಂಚಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಈಗ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇದಲ್ಲದೆ 'ಸೋಲ್' ಮತ್ತು 'ನಯೀಮ್ ಡೈರೀಸ್' ಎಂಬ ಚಿತ್ರಗಳಲ್ಲೂ ಅವರು ನಟಿಸುತ್ತಿದ್ದಾರೆ. ಈ ಪೈಕಿ 'ಸೋಲ್' ಅರಣ್ಯ ರಕ್ಷಣೆಯ ಕುರಿತಾದ ಚಿತ್ರವಾದರೆ, 'ನಯೀಮ್ ಡೈರೀಸ್' ಚಿತ್ರವು ಗ್ಯಾಂಗ್ಸ್ಟರ್ ಒಬ್ಬನ ಬಯೋಪಿಕ್ ಅಂತೆ. ಈ ಎಲ್ಲ ಚಿತ್ರಗಳಲ್ಲೂ ವಸಿಷ್ಠಗೆ ವಿಭಿನ್ನವಾದ ಪಾತ್ರಗಳಿದ್ದು, ಸಿನಿಮಾಗಳ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.