ಸಣ್ಣ ಪುಟ್ಟ ಪಾತ್ರಗಳಿಂದ ನಟನೆ ಆರಂಭಿಸಿ ಖಳನಟನಾಗಿ ಖ್ಯಾತಿ ಹೊಂದಿ ಇದೀಗ ನಾಯಕನಾಗಿ ಬಡ್ತಿ ಪಡೆದಿರುವ ವಸಿಷ್ಠ ಸಿಂಹ ಈಗ ಬಹಳ ಬ್ಯುಸಿ ನಟ. ಇದೀಗ ಸುಮಾರು 5 ಸಿನಿಮಾಗಳು ಅವರ ಕೈಯಲ್ಲಿ ಇವೆ. ಸದ್ಯಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.
ಈ ಸಿನಿಮಾದ ಮೇಲೆ ನನಗೆ ಬಹಳ ಭರವಸೆ ಇದೆ. ಅದಕ್ಕೆ ಕಾರಣ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ಮತ್ತು ಚಿತ್ರಕಥೆ. ಈ ಚಿತ್ರದ ಕಾಸ್ಟ್ಯೂಮ್ನಿಂದ ಹಿಡಿದು ಆಡುವ ಭಾಷೆ, ಪಾತ್ರದ ವಿವಿಧತೆ, 14ನೇ ಶತಮಾನದಿಂದ ಹಿಡಿದು ಇಲ್ಲಿಯವರೆಗೂ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸಂಬಂಧ... ಹೀಗೆ ಅನೇಕ ಪದರಗಳಲ್ಲಿ ಸಿನಿಮಾ ಸಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ನಾನು ಇಂಗ್ಲೆಂಡ್ನಲ್ಲಿರುವ ದೇಶಿ ಹುಡುಗನಾಗಿ ನಟಿಸಿದ್ದೇನೆ. ಸಂಭಾಷಣೆಯಲ್ಲಿ ಕನ್ನಡದೊಂದಿಗೆ ಇಂಗ್ಲಿಷ್ ಟಚ್ ಕೂಡಾ ಇರಲಿದೆ. ಈ ಸಿನಿಮಾ ಮೊದಲು ಫಾರಿನ್ ಫಿಲಮ್ ಫೆಸ್ಟಿವಲ್ನಲ್ಲಿ ಪ್ರದರ್ಶನವಾಗಲಿದೆ. ಆದ್ದರಿಂದಲೇ ಒಂದು ವಿಭಿನ್ನ ಶೈಲಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ. ನವೆಂಬರ್ ವೇಳೆಗೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವಷಿಷ್ಠ ಹೇಳಿದ್ದಾರೆ.
ಇದೀಗ ವಷಿಷ್ಠ ಸಿಂಹ ತೆಲುಗು ಭಾಷೆಯಲ್ಲಿ ಕೂಡಾ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಗ್ಯಾಂಗಸ್ಟರ್ ಬಯೋಪಿಕ್. ಚಿತ್ರಕ್ಕಾಗಿ ನಾನು ತೆಲಂಗಾಣ ಶೈಲಿಯ ತೆಲುಗು ಮಾತನಾಡಿದ್ದೇನೆ ಎಂದಿದ್ದಾರೆ. ಪ್ರತಿ ಶಾಟನ್ನು ಎರಡೆರಡು ಬಾರಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಹೊಸ ಕಥೆಗಳನ್ನು ಕೂಡಾ ವಸಿಷ್ಠ ಕೇಳುತ್ತಿದ್ದಾರಂತೆ. 'ಯಾವುದಾದರೂ ಕೆಟ್ಟ ಕಥೆ ಕೇಳಿದರೆ ಮೂರು ದಿನ ನಿದ್ರೆ ಬರುವುದಿಲ್ಲ. ಆದರೆ ಒಂದೊಳ್ಳೆ ಕಥೆ ಕೇಳಿದರೆ ಅದು ನನ್ನನ್ನು ಒಂದು ವಾರ ಕಾಡುತ್ತದೆ. ನನಗೆ ಒಳ್ಳೆಯ ಪಾತ್ರಗಳನ್ನು ಮಾಡಿದ ನೆಮ್ಮದಿ ದೊರೆಯಬೇಕು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಕಥೆಗಳನ್ನು ಆಯ್ಕೆ ಮಾಡುತ್ತೇನೆ ಎನ್ನುತ್ತಾರೆ ಸಿಂಹ.
ಕಾಲಚಕ್ರ ಸಿನಿಮಾದಲ್ಲಿ ಎರಡು ಶೇಡ್ ಇದ್ದು, 30 ವರ್ಷದ ವ್ಯಕ್ತಿ ಹಾಗೂ 65 ವರ್ಷದ ವೃದ್ಧನ ಪಾತ್ರದಲ್ಲಿ ನಟಿಸಿದ್ದಾರಂತೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆ. ಪಿಆರ್ಕೆ ಸಂಸ್ಥೆಯ 'ಮಾಯಾ ಬಜಾರ್' ಚಿತ್ರದಲ್ಲಿ ಇವರ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಕೆಜಿಎಫ್-2ರಲ್ಲಿ ವಸಿಷ್ಠ ನಟಿಸುತ್ತಿದ್ದಾರಾ ಇಲ್ಲವಾ ಎಂಬ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ.