ಸ್ಯಾಂಡಲ್ವುಡ್ ವಸಿಷ್ಠ ಸಿಂಹ ಇದೀಗ ತೆಲುಗು ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ಸಖತ್ ಬ್ಯುಸಿಯಾಗಿದ್ದಾರೆ. ಈ ಹಿಂದೆ ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ವಸಿಷ್ಠಗೆ 'ಓದೆಲ ರೈಲ್ವೆ ಸ್ಟೇಷನ್' ತೆಲುಗಿನ ಚೊಚ್ಚಲ ಸಿನಿಮಾ.
ಈ ಚಿತ್ರದ ವಸಿಷ್ಠರ ಫಸ್ಟ್ ಲುಕ್ ಇಂದು ರಿವಿಲ್ ಆಗಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಸ್ಟ್ ಲುಕ್ ಪೋಸ್ಟರ್ ಶೇರ್ ಮಾಡಿರುವ ನಟ ವಸಿಷ್ಠ, ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿಯಾಗಿ ಕಾಣಿಸಿಕೊಂಡಿದ್ದೇನೆ. ಇದು ನನ್ನ ಚೊಚ್ಚಲ ತೆಲುಗು ಸಿನಿಮಾ. ನಾನಿದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ ಎಂದು ಬರೆದುಕೊಂಡಿದ್ದಾರೆ.
ಓದೆಲ ರೈಲ್ವೆ ಸ್ಟೇಷನ್ ಚಿತ್ರಕ್ಕೆ ನಿರ್ದೇಶಕ ಅಶೋಕ್ ತೇಜ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾದಲ್ಲಿ ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ ನಾಯಕಿಯರಾಗಿ ನಟಿಸುತ್ತಿದ್ದಾರೆ.
ತೆಲುಗಿನಲ್ಲಿ 'ತಿರುಪತಿ'ಯಾದ ಕನ್ನಡದ 'ಸಿಂಹ' ವಸಿಷ್ಠ ಸಿಂಹ ಕನ್ನಡದ ಹಲವು ಸಿನಿಮಾಗಳಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಯಶ್ ಅಭಿನಯದ 'ರಾಜಾ ಹುಲಿ' ಸಿನಿಮಾ ಒಂದೊಳ್ಳೆ ಬ್ರೇಕ್ ನೀಡಿತು. ನಂತ್ರ ರುದ್ರ ತಾಂಡವ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸುಂದರಾಂಗ ಜಾಣ, ಮಫ್ತಿ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-1 ಚಿತ್ರದಲ್ಲಿಯೂ ವಸಿಷ್ಠ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಪಾತ್ರದಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಸಿನಿಮಾದಲ್ಲಿಯೂ ನಟಿಸಿದ್ದು, ಅಭಿಮಾನಿಗಳನ್ನು ಯಾವ ರೀತಿ ಮೋಡಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.