ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಪತ್ನಿ ಗಾಯಕಿ ವಾಣಿ ಹರಿಕೃಷ್ಣ ಬೇಸರಗೊಂಡಿದ್ದಾರೆ. 'ಈ ಬದುಕೇ ಬೇಡ ಅನ್ನಿಸಿಬಿಡುತ್ತದೆ' ಎಂದು ತಮ್ಮ ಫೇಸ್ಬುಕ್ನಲ್ಲಿ ನೋವಿನ ಪೋಸ್ಟ್ ಮಾಡಿದ್ದಾರೆ. ಅವರು ನೊಂದುಕೊಳ್ಳಲು ಕಾರಣ ಕುರುಕ್ಷೇತ್ರ ಹಾಗೂ ರಾಂಧವ ಸಿನಿಮಾಗಳಂತೆ.
ಹೌದು, ಡಿಬಾಸ್ ದರ್ಶನ್ ನಟಿಸಿರುವ ಕುರುಕ್ಷೇತ್ರ ಹಾಗೂ ಬಿಗ್ಬಾಸ್ ಭುವನ್ ಗೌಡ ನಟಿಸಿರುವ ರಾಂಧವ ಸಿನಿಮಾಗಳಿಗೆ ವಾಣಿ ಹಾಡಿದ್ದರು. ಆದರೆ, ಇವರು ಕಂಠ ನೀಡಿರುವ ಹಾಡುಗಳನ್ನು ಕೈಬಿಟ್ಟಿರುವ ಚಿತ್ರತಂಡಗಳು, ಬೇರೆಯವರ ಕಂಠದಲ್ಲಿರುವ ಹಾಡುಗಳನ್ನು ಬಳಸಿಕೊಂಡಿದ್ದಾರಂತೆ. ಸಹಜವಾಗಿಯೇ ಇದು ವಾಣಿ ಅವರಿಗೆ ಬೇಸರ ಮೂಡಿಸಿದೆ. ತಮ್ಮ ನೋವನ್ನು ಅವರು ನಿನ್ನೆ ಹೊರಹಾಕಿದ್ದು, 'ಬದುಕೇ ಬೇಡ ಅನ್ನಿಸಿಬಿಡುತ್ತದೆ, ಒಂದು ಹಾಡೇ ಜೀವನವಲ್ಲ ಅಂತಾರೆ. ಆದರೆ, ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ. ಈಗ 'ಕುರುಕ್ಷೇತ್ರ' ಹಾಗೂ 'ರಾಂಧವ' ಚಿತ್ರಗಳಲ್ಲಿ ನನ್ನನ್ನು ಹಾಡಿಸಿ, ಧ್ವನಿ ಉಳಿಸಿಲ್ಲ. ಬೇರೆಯವರನ್ನು ಹಾಡಿಸುವುದಾದರೆ ನಮ್ಮಿಂದ ಹಾಡಿಸಲೇಬಾರದು' ಎಂದು ನೋವು ತೋಡಿಕೊಂಡಿದ್ದಾರೆ.
ಕುರುಕ್ಷೇತ್ರ ಚಿತ್ರಕ್ಕೆ ತಮ್ಮ ಪತಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಲ್ಲದೆ ರಾಂಧವ ಚಿತ್ರಕ್ಕೆ ತಮ್ಮ ಮುಂದೆ ಹಾಡಿ ಬೆಳೆದ ಶಶಾಂಕ್ ಶೇಷಗಿರಿ ಸಂಗೀತ ನೀಡಿದ್ದಾರೆ. ಹೀಗಿರುವಾಗ ಗಾಯಕಿಯರನ್ನು ಬದಲಿಸುವ ವಿಚಾರ ತಮ್ಮ ಗಮನಕ್ಕೆ ತರದೇ ಇರುವುದು ವಾಣಿ ಬೇಸರಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ನಿನ್ನೆ ನಮಗೆ ಕಾಲ್ ಮಾಡಿದ ವಾಣಿ ಬೇಸರ ವ್ಯಕ್ತಪಡಿಸಿದರು ಎಂದು ಶಶಾಂಕ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.