2016ರಲ್ಲಿ ತೆರೆಗೆ ಬಂದ ಪವನ್ ಕುಮಾರ್ ನಿರ್ದೇಶನದ ಯುಟರ್ನ್ ಸಿನಿಮಾ ಭಾರೀ ಹೆಸರು ಮಾಡಿತ್ತು. ಶ್ರದ್ಧಾ ಶ್ರೀನಾಥ್ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪರಿಚಯವಾಗಿದ್ದರು. ನಂತರ ಈ ಸಿನಿಮಾ ತೆಲುಗಿಗೆ ಕೂಡಾ ಅದೇ ಹೆಸರಿನಲ್ಲಿ ರೀಮೇಕ್ ಆಗಿತ್ತು. ಸಮಂತಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ತೆರೆಗೆ ಬರಲು ಸಜ್ಜಾಗಿದೆ ಯುಟರ್ನ್ ಸೀಕ್ವೆಲ್: ನಿರ್ದೇಶಕ ಯಾರು...?
ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಪವನ್ ಕುಮಾರ್ ನಿರ್ದೇಶನದ ಯುಟರ್ನ್ ಭಾಗ 2 ತೆರೆಗೆ ಬರಲು ಸಜ್ಜಾಗಿದೆ. ಆದರೆ ಇಲ್ಲಿ ಹೊಸಬರ ತಂಡ ಸಿನಿಮಾ ತಯಾರಿಸುತ್ತಿದೆ. ಚಂದ್ರು ಓಬಯ್ಯ ಈ ಸಿನಿಮಾ ನಿರ್ದೇಶನದ ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾಗಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಕಲೆಕ್ಷನ್ ಮಾಡಿದ್ದ ಯುಟರ್ನ್ ಸಿನಿಮಾದ ಭಾಗ-2 ತಯಾರಾಗುತ್ತಿದೆ. ಆದರೆ ಇದರ ನಿರ್ದೇಶಕ ಪವನ್ ಕುಮಾರ್ ಅಲ್ಲ. ಇಲ್ಲಿ ಶ್ರದ್ಧಾ ಶ್ರೀನಾಥ್ ಕೂಡಾ ಇರುವುದಿಲ್ಲ. ಬದಲಾಗಿ ಇಲ್ಲೊಂದು ಹೊಸಬರ ಚಿತ್ರತಂಡ ಯುಟರ್ನ್ -2 ಟೈಟಲ್ ಇಟ್ಟುಕೊಂಡು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಟ್ರಿಗರ್ ಸಿನಿಮಾದಲ್ಲಿ ಸಹ ನಟನಾಗಿ ಹಾಗೂ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ಚಂದ್ರು ಓಬಯ್ಯ ಯುಟರ್ನ್ -2 ಟೈಟಲ್ ಮೂಲಕ ಸಸ್ಪೆನ್ಸ್, ಹಾರರ್ ಕಥೆ ಹೇಳಲು ಹೊರಟಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡಲು ನಿರ್ದೇಶಕ ಚಂದ್ರು ಓಬಯ್ಯ, ಯುವ ನಟಿ ಚಂದನ ಸೇಗು, ಕಿರಿಕ್ ಪಾರ್ಟಿ ರಘು ರಾಮನಕೊಪ್ಪ, ವಿಕ್ಟರಿ ವಾಸು ಹಾಗೂ ನಿರ್ಮಾಪಕ ಆನಂದ್ ಸಂಪಂಗಿ ಸುದ್ದಿಗೋಷ್ಠಿ ಏರ್ಪಡಿಸಿದ್ದರು.
ಚಂದ್ರು ಓಬಯ್ಯ ಈ ಚಿತ್ರದಲ್ಲಿ ನಿರ್ದೇಶನ, ಸಂಗೀತ ನಿರ್ದೇಶನದೊಂದಿಗೆ ಆ್ಯಕ್ಟಿಂಗ್ ಕೂಡಾ ಮಾಡುತ್ತಿದ್ದಾರೆ. ಚಂದನ ಸೇಗು ಈ ಚಿತ್ರದಲ್ಲಿ ಬೋಲ್ಡ್ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಂದೆಯ ಆಸೆಯಂತೆ ನಿರ್ಮಾಪಕ ಆನಂದ್ ಸಂಪಂಗಿ ಈ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆದರೆ ಈ ಸಿನಿಮಾ ಟೈಟಲ್ಗೆ ಸಂಬಂಧಿಸಿದಂತೆ ನಾವು ಯುಟರ್ನ್ ನಿರ್ದೇಶಕ ಪವನ್ ಕುಮಾರ್ ಅವರನ್ನು ಸಂಪರ್ಕಿಸಿಲ್ಲ. ಮುಂದಿನ ದಿನಗಳಲ್ಲಿ ಚಿತ್ರದ ಟೈಟಲ್ ಬಗ್ಗೆ ಏನಾದರೂ ಸಮಸ್ಯೆ ಆದರೆ ಆಗ ನೋಡೋಣ ಎನ್ನುತ್ತಾರೆ ಚಂದ್ರು ಓಬಯ್ಯ. ಪಿಜ್ಜಾ ಸ್ಟೋರ್ನಲ್ಲಿ ಕೆಲಸ ಮಾಡುವ ನಾಯಕ ದೆವ್ವವೊಂದರ ಜೊತೆ ಪರದಾಡುವ ಪರಿಸ್ಥಿತಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರು, ಸಕಲೇಶಪುರ, ಚಿಕ್ಕಮಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.