ನಟ-ನಟಿಯರು ಸಿನಿಮಾ ಮಾತ್ರವಲ್ಲದೆ ಕೆಲವೊಮ್ಮೆ ಇತರ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಐರಾವತ' ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರೌತೇಲ ಕೂಡಾ ಇದೀಗ ಸುದ್ದಿಯಾಗಿದ್ದಾರೆ.
ಹಾಲ್ಗೆನ್ನೆ ಸುಂದರಿ ಊರ್ವಶಿ ಇದೀಗ ಹಾಲಿನಲ್ಲಿ ಸ್ನಾನ ಮಾಡುವ ಮೂಲಕವೇ ಎಲ್ಲರ ಕೇಂದ್ರಬಿಂದುವಾಗಿದ್ದಾರೆ. ಈ ಬೋಲ್ಡ್ ಹಾಗೂ ಬ್ಯೂಟಿಫುಲ್ ನಟಿ ಹಾಲಿನ ಬಾತ್ ಟಬ್ನಲ್ಲಿ ಸ್ನಾನ ಮಾಡುತ್ತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಷನ್ ನೀಡಿ ಎಂದು ಕೂಡಾ ಅಭಿಮಾನಿಗಳ ಬಳಿ ಕೇಳಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗಿದ್ದು ಊರ್ವಶಿ ಅಭಿಮಾನಿಗಳಂತೂ ಫೋಟೋ ನೋಡಿ ವಾಹ್ ಎಂದು ಉದ್ಘರಿಸಿದ್ದಾರೆ.
ದೇವಾನುದೇವತೆಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ, ನಟರ ಪೋಸ್ಟರ್ಗಳಿಗೆ ಹಾಲಿನ ಅಭಿಷೇಕ ಮಾಡುವುದನ್ನು ನೋಡಿದ್ದೇವೆ. ಆದರೆ ಊರ್ವಶಿ ಒಂದು ಹೆಜ್ಜೆ ಮುಂದೆ ಹೋಗಿ ಹಾಲಿನಲ್ಲೇ ಸ್ನಾನ ಮಾಡಿರುವುದು ನಿಜಕ್ಕೂ ಆಶ್ಚರ್ಯ ಉಂಟು ಮಾಡಿದೆ. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ಹಾಲಿನಲ್ಲಿ ಸ್ನಾನ ಮಾಡುವ ಅಗತ್ಯ ಏನಿತ್ತು ಎಂದು ಕೇಳಿದ್ದಾರೆ. ಮತ್ತೆ ಕೆಲವರು ಹಾಲಿನ ಸ್ನಾನ ಮಾಡುವ ಬದಲಿಗೆ ಹಾಲನ್ನು ಬಡವರಿಗೆ ದಾನ ಮಾಡಬಹುದಿತ್ತು ಎಂದು ಕಮೆಂಟ್ ಮಾಡಿದ್ದಾರೆ.
'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಬಾಲಿವುಡ್ ಜರ್ನಿ ಆರಂಭಿಸಿದ ಊರ್ವಶಿಗೆ ಹೆಸರು ನೀಡಿದ್ದು 'ಸನಮ್ ರೇ' ಚಿತ್ರ. ಇನ್ಸ್ಟಾಗ್ರಾಮ್ನಲ್ಲಿ 26 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿರುವ ಊರ್ವಶಿ, ಆಗ್ಗಾಗ್ಗೆ ತಮ್ಮ ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುತ್ತಿರುತ್ತಾರೆ. ಹೊಳಪಿನ ಸೌಂದರ್ಯಕ್ಕಾಗಿ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಮಿಲ್ಕ್ ಬಾತ್ ಮಾಡಿಕೊಳ್ಳುತ್ತಿದ್ದರು ಎಂಬ ವಿಚಾರ ಕೇಳಿದ್ದೆವು. ಇದೀಗ ಊರ್ವಶಿ ಕೂಡಾ ಕ್ಲಿಯೋಪಾತ್ರ ಅವರನ್ನು ಫಾಲೋ ಮಾಡುತ್ತಿರುವಂತಿದೆ. ಒಟ್ಟಾರೆ ಈ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.