ವಜ್ರಮುನಿ
1944 ಮೇ 11 ರಂದು ಬೆಂಗಳೂರಿನಲ್ಲಿ ಜನಿಸಿದ ವಜ್ರಮುನಿ ಮೊದಲ ಹೆಸರು ಸದಾನಂದ ಸಾಗರ್. ಅವರ ಕುಟುಂಬದ ಸದಸ್ಯರು ವಜ್ರಮುನೇಶ್ವರ ದೇವರನ್ನು ಹೆಚ್ಚು ಆರಾಧಿಸುತ್ತಿದ್ದರಿಂದ ನಂತರ ಅವರಿಗೆ ವಜ್ರಮುನಿ ಎಂಬ ಹೆಸರಿಡಲಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಇ ಪದವಿ ಮುಗಿಸಿದ ವಜ್ರಮುನಿ ಕಲೆಯಲ್ಲಿ ಆಸಕ್ತಿ ಇದ್ದ ಕಾರಣ ಆ್ಯಕ್ಟಿಂಗ್ ಕಲಿಯಲು ನೀನಾಸಂ ಸಂಸ್ಥೆ ಸೇರಿದರು. ನೀನಾಸಂನಲ್ಲಿ ಕಲಿಯುವಾಗಲೇ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಅವರ 'ಪ್ರಚಂಡ ರಾವಣ' ನಾಟಕದಲ್ಲಿ ರಾವಣನ ಪಾತ್ರ ಮಾಡಿ ಎಲ್ಲರ ಮನಗೆದ್ದರು. ಮುಖ್ಯವಾಗಿ ಅವರ ಅಭಿನಯ ಪುಟ್ಟಣ್ಣ ಕಣಗಾಲ್ ಅವರನ್ನು ಸೆಳೆಯಿತು. ವಜ್ರಮುನಿ ಅವರಿಗೆ ಪುಟ್ಟಣ್ಣ 'ಸಾವಿರ ಮೆಟ್ಟಿಲು' ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಆದರೆ ಆ ಸಿನಿಮಾ ಬಿಡುಗಡೆಯಾಗಲೇ ಇಲ್ಲ.
'ಮಲ್ಲಮ್ಮನ ಪವಾಡ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ವಜ್ರಮುನಿ ಬಂಗಾರದ ಮನುಷ್ಯ, ದಾರಿ ತಪ್ಪಿದ ಮಗ, ಹುಲಿಯ ಹಾಲಿನ ಮೇವು, ಅಂತ, ಸಿಬಿಐ ಶಂಕರ್, ಸಂಪತ್ತಿಗೆ ಸವಾಲ್, ಒಡಹುಟ್ಟಿದವರು ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿದ್ದಾರೆ. ತೆರೆ ಮೇಲೆ ಖಡಕ್ ಆಗಿ ಅಭಿನಯಿಸುತ್ತಿದ್ದ ನಟ ವಜ್ರಮುನಿ ನಿಜ ಜೀವನದಲ್ಲಿ ಬಹಳ ಮೃದು ಸ್ವಭಾವದವರು. ಒಂದು ಕಾಲದಲ್ಲಿ ತೆರೆಯ ಮೇಲೆ ಅಬ್ಬರಿಸಿದ ನಟನಿಗೆ ಎರಡೂ ಕಿಡ್ನಿಗಳೂ ಫೇಲ್ ಆಗಿ ಅನಾರೋಗ್ಯದಿಂದ ಬಳಲುವಂತಾಯಿತು. 2006 ಜನವರಿ 5 ರಂದು ವಜ್ರಮುನಿ ಅಲಿಯಾಸ್ ಸದಾನಂದ ಸಾಗರ್ ನಮ್ಮನ್ನೆಲ್ಲಾ ಬಿಟ್ಟು ಅಗಲಿದರು. ವಜ್ರಮುನಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಅಭಿನಯದ ಸಿನಿಮಾಗಳು ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಚಿರಾಯು.