ಕನ್ನಡ ಚಿತ್ರರಂಗದಲ್ಲಿ ಎಷ್ಟೋ ಪ್ರತಿಭಾನ್ವಿತ ನಟ-ನಟಿಯರು ಚಿಕ್ಕವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೊನ್ನೆಯಷ್ಟೇ ಚಿರಂಜೀವಿ ಸರ್ಜಾ ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರಿಗೆ 39 ವರ್ಷ ವಯಸ್ಸಷ್ಟೇ. ಇನ್ನು ನಿವೇದಿತಾ ಜೈನ್ ನಿಮಗೆ ನೆನಪಿರಬಹುದು. 17 ನೇ ವಯಸ್ಸಿನಲ್ಲೇ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ 19ನೇ ವಯಸ್ಸಿಗೆ ಪ್ರಾಣ ಕಳೆದುಕೊಂಡ ಹುಡುಗಿ ನಿವೇದಿತಾ ಜೈನ್.
9 ಜೂನ್ 1979 ರಂದು ಜನಿಸಿ 10 ಜೂನ್ 1998 ರಂದು ಅಸು ನೀಗಿದ ನಿವೇದಿತಾ ಜೈನ್ ಅಭಿನಯಿಸಿದ ಸಿನಿಮಾಗಳು ಇನ್ನೂ ಫೇಮಸ್. 'ಅಮೃತ ವರ್ಷಿಣಿ' ಚಿತ್ರದಲ್ಲಿ ರಮೇಶ್ ಅರವಿಂದ್ ಈ ನಿವೇದಿತಾ ಜೈನ್ ರೂಪವನ್ನು 'ಭಲೇ ಭಲೇ ಚಂದದ ಚಂದುಳ್ಳಿ ಹೆಣ್ಣು ನೀನು' ಎಂದು ಹೊಗಳಿದ್ದರು. 'ಶಿವಸೈನ್ಯ' ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು 'ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ' ಎಂದು ಹಾಡಿದ್ದರು. ಈ ಹಾಡುಗಳು ಇಂದಿಗೂ ಸಿನಿರಸಿಕರ ಮನಸ್ಸಿನಲ್ಲಿದೆ.
17 ನೇ ವಯಸ್ಸಿಗೆ ರಾಘವೇಂದ್ರ ರಾಜ್ಕುಮಾರ್ ಅವರೊಂದಿಗೆ 'ಶಿವರಂಜಿನಿ' ಚಿತ್ರದಲ್ಲಿ ನಟಿಸುವ ಮೂಲಕ ನಿವೇದಿತಾ ಜೈನ್ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟರು. ನಂತರ ಶಿವರಾಜ್ ಕುಮಾರ್ ಜೊತೆ 'ಶಿವಸೈನ್ಯ', ಶಶಿಕುಮಾರ್ ಜೊತೆ 'ನೀ ಮುಡಿದ ಮಲ್ಲಿಗೆ', 'ಬಾಳಿದ ಮನೆ', ರಮೇಶ್ ಅರವಿಂದ್ ಜೊತೆ 'ಅಮೃತ ವರ್ಷಿಣಿ', ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ 'ಪ್ರೇಮರಾಗ ಹಾಡು ಗೆಳತಿ', 'ಬಾಳಿನ ದಾರಿ', 'ಸೂತ್ರಧಾರ', 'ಮಿಸ್ಟರ್ ಪುಟ್ಸ್ವಾಮಿ', 'ಸ್ಕೆಚ್' ತಮಿಳು ಸಿನಿಮಾ 'ತಾಯಿನ್ ಮಣಿಕೊಂಡಿ' ಸಿನಿಮಾಗಳಲ್ಲಿ ಅಭಿನಯಿಸಿದರು. ಈ ಎಲ್ಲಾ ಸಿನಿಮಾಗಳನ್ನು ಕೇವಲ 2 ವರ್ಷಗಳ ಅವಧಿಯಲ್ಲೇ ಪೂರೈಸಿದ್ದರು. ಆಗ ಅವರಿಗೆ ಅಷ್ಟು ಬೇಡಿಕೆ ಇತ್ತು.
ನಿವೇದಿತಾ ಜೈನ್ ಅವರು ಮಿಸ್ ಬೆಂಗಳೂರು ಕಿರೀಟ ಕೂಡಾ ಪಡೆದಿದ್ದರು. 18 ಮೇ 1998 ರಂದು ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ಮನೆಯ ಮೇಲೆ ಬ್ಯೂಟಿ ಸ್ಪರ್ಧೆಯೊಂದಕ್ಕೆ ಭಾಗವಹಿಸುವ ಸಲುವಾಗಿ ಕ್ಯಾಟ್ ವಾಕ್ ಅಭ್ಯಾಸ ಮಾಡುತ್ತಿದ್ದ ವೇಳೆ ಆಯ ತಪ್ಪಿ ಮಹಡಿ ಮೇಲಿಂದ ಬಿದ್ದ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇಲಿಂದ ಬಿದ್ದ ರಭಸಕ್ಕೆ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಸುಮಾರು 24 ದಿನಗಳ ಕಾಲ ಅವರು ಕೋಮಾದಲ್ಲಿದ್ದರು. ಅವರ ತಂದೆ ರಾಜೇಂದ್ರ ಜೈನ್ ಮಗಳನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 10 ರಂದು ನಿವೇದಿತಾ ಸಾವನ್ನಪ್ಪಿದರು. ಬ್ಯಾಟರಾಯನಪುರ ಪೊಲೀಸರು ಇದು ಆಕಸ್ಮಿಕ ಸಾವು ಎಂದು ಕೇಸ್ ದಾಖಲಿಸಿಕೊಂಡರು.
ನಾಳೆಗೆ ಈ ಚೆಲುವೆ ಮರೆಯಾಗಿ 22 ವರ್ಷಗಳು ತುಂಬಲಿದೆ. ಆಕೆ ಇಂದು ಜೀವಂತವಾಗಿ ಇಲ್ಲದಿದ್ದರೂ ಆ ಮುದ್ದು ಮುಖ, ಸುಂದರ ನಗು ಕನ್ನಡ ಪ್ರೇಕ್ಷಕರ ಮನದಲ್ಲಿದೆ.