ಕಳೆದ ವಾರ ಆರು ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದವು. ಇಂದು ಏಳು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ಹೊಸಬರ ಹಾಗೂ ಹಳಬರ ನಡುವೆ ಪೈಪೋಟಿ ಏರ್ಪಟಿದ್ದು, ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕು.
ಬಹು ನಿರೀಕ್ಷಿತ ಶಿವರಾಜಕುಮಾರ್ ಅವರ ‘ಆಯುಷ್ಮಾನ್ ಭವ’, ನಾಲ್ಕು ಹಾಸ್ಯ ನಟರುಗಳಾದ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಅಭಿನಯದ ‘ಮನೆ ಮಾರಾಟಕ್ಕಿದೆ’, ಹೊಸ ತಂಡದ ‘ನಂ ಗಣಿ ಬಿ ಕಾಂ ಪಾಸ್’, ರಾಜ ಪಥ, ರಿಲ್ಯಾಕ್ಸ್ ಸತ್ಯ, ಪ್ರೀತಿ ಇರಬಾರದೇ ಮತ್ತು ಉತ್ತರ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಆಗುತ್ತಿರುವ ‘ಭಾಗ್ಯಶ್ರೀ’ ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿದೆ.
ಆಯುಷ್ಮಾನ್ ಭವ ದ್ವಾರಕೀಶ್ ಚಿತ್ರ ಲಾಂಛನದ 52 ನೇ ಸಿನಿಮಾ, ದ್ವಾರಕೀಶ್ ಅವರ 50ನೇ ವರ್ಷದ ಸಂಭ್ರಮದಲ್ಲಿ 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಆಯುಷ್ಮಾನ್ ಭವ ಚಿತ್ರದಲ್ಲಿ ಮೊದಲ ಬಾರಿಗೆ ಡಾ ಶಿವರಾಜಕುಮಾರ್ ಜೊತೆ ರಚಿತ ರಾಮ್ ನಾಯಕಿ ಆಗಿದ್ದಾರೆ. ಅನಂತ್ ನಾಗ್, ರಮೇಶ್ ಭಟ್, ನಿಧಿ ಸುಬ್ಬಯ್ಯ, ಸುಹಾಸಿನಿ, ಶಿವಾಜಿ ಪ್ರಭು, ಸಾಧು ಕೋಕಿಲ, ರಂಗಾಯಣ ರಘು, ಯಷ್ ಶೆಟ್ಟಿ ಹಾಗೂ ಇತರರು ಪಾತ್ರ ನಿರ್ವಹಿಸಿದ್ದಾರೆ.
ಮನೆ ಮಾರಾಟಕ್ಕಿದೆ ಎಸ್ ವಿ ಬಾಬು ಅವರ 16 ನೇ ಕನ್ನಡ ಸಿನಿಮಾ. ಇದು ನಾಲ್ಕು ಕಾಮಿಡಿ ನಟರುಗಳ ಸಂಗಮ. ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ರವಿಶಂಕರ್ ಜೊತೆ ಶೃತಿ ಹರಿಹರನ್, ಕಾರುಣ್ಯ ರಾಮ್, ಬೇಬಿ ಪರಿಶ್ವಿತ, ರಾಜೇಶ್ ನಟರಂಗ, ಶಿವರಾಮಣ್ಣ, ಗಿರಿ, ನಿನಾಸಂ ಅಶ್ವಥ್ ತಾರಾಗಣದಲ್ಲಿದ್ದಾರೆ.
ನಂ ಗಣಿ ಬಿ ಕಾಂ ಪಾಸ್ ಇದು ಬೃಂದಾವನ್ ಫಿಲ್ಮ್ಸ್ ಅಡಿಯಲ್ಲಿ ನಾಗೇಶ್ ಕುಮಾರ್ ಅವರ ಎರಡನೇ ಕನ್ನಡ ಸಿನಿಮಾ. ಸೋಂಬೇರಿ ಹುಡುಗ ಬಿ ಕಾಂ ಪಾಸ್ ಆದರೂ ದೊಡ್ಡ ಕೆಲಸ ಬೇಕು ಅಂತ ಪ್ರಯತ್ನ ಪಡುವ ಕಷ್ಟ, ಆತ ಸಮಾಜದಲ್ಲಿ, ಮನೆಯಲ್ಲಿ ಹಾಗೂ ಸಂಬಂಧಿಕರಲ್ಲಿ, ಪ್ರೀತಿಸಿದವಳಿಂದ ಅನುಭವಿಸುವ ಅವಮಾನ ಈ ಸಿನಿಮಾದಲ್ಲಿ ಮೂಡಿ ಬರಲಿದೆ.
ಉತ್ತರ ಕರ್ನಾಟಕದಲ್ಲಿ ಮಾತ್ರ ‘ಭಾಗ್ಯಶ್ರೀ’ ಬಿಡುಗಡೆಯಾಗುತ್ತಿದೆ. ಕಾದಂಬರಿ ಆಧಾರಿತ ಚಿತ್ರವಾಗಿರುವ ಇದು ಬಾಲ್ಯ ವಿವಾಹದ ದುಷ್ಪರಿಣಾಮ ಕುರಿತಾದ ಸಿನಿಮಾ. ಬನಶಂಕರಿ ಆರ್ಟ್ಸ್ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ.
ಎಸ್ ವಿ ಬಾಬು ಅವರ ಮನೆ ಮಾರಾಟಕ್ಕಿದೆ ರಿಲ್ಯಾಕ್ಸ್ ಸತ್ಯ –ರೆಡ್ ಡ್ರಾಗನ್ ಫಿಲ್ಮ್ಸ್ ಅಡಿಯಲ್ಲಿ ಮೋಹನ್ ಕುಮಾರ್, ಮೋಹನ್ ರೆಡ್ಡಿ ಹಾಗೂ ಚೇತನ್ ನಿರ್ಮಾಣದ ಈ ಚಿತ್ರ ಭೂಗತ ಲೋಕದ ಕಥಾ ವಸ್ತು ಹೊಂದಿದೆ. ಇಲ್ಲಿ ರೌಡಿ ಚಟುವಟಿಕೆಗೆ ಹಾಸ್ಯದ ಮಿಶ್ರಣ ಸಹ ಬೆರೆಸಲಾಗಿದೆ.
ಪ್ರೀತಿ ಇರಬಾರದೆ- ಗೋಲ್ಡ್ ಟೈಮ್ ಇನ್ ಪಿಕ್ಚರ್ಸ್ ಅಡಿಯಲ್ಲಿ ಡಾ ಲಿಂಗೇಶ್ವರ್ ನಿರ್ಮಾಣದ ಈ ಚಿತ್ರಕ್ಕೆ ನಿರ್ಮಾಪಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ನವೀನ್ ನಯನಿ ನಿರ್ದೇಶನ ಮಾಡಿದ್ದಾರೆ.
ರಾಜ ಪಥ ಸಂತೋಷ್ ಮಹಾರಾಜ್ ಫಿಲ್ಮ್ಸ್ ಅಡಿಯಲ್ಲಿ ಸಂತೋಷ್ ಹೆಚ್ ರೈಕಾರ್ ನಿರ್ಮಾಣದ ಮೂಗುರು ಸಿದ್ದು ರಚಿಸಿ ನಿರ್ದೇಶನ ಮಾಡಿರುವ ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಪ್ರತಿಯೊಬ್ಬರಿಗೂ ಕನಸು ಇರುತ್ತದೆ. ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ, ಪ್ರೀತಿ, ಪ್ರೇಮ ಹಾಗೂ ಸ್ನೇಹ ಮುಖ್ಯ ಎಂದು ಈ ಚಿತ್ರ ಸಾರುತ್ತದೆ.