ಹೈದರಾಬಾದ್: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ನಟ ಸೋನು ಸೂದ್ ಮಾಡುತ್ತಿರುವ ಸಾಮಾಜಿಕ ಕಾರ್ಯದಿಂದ ಅಭಿಮಾನಿ ಬಳಗ ಹೆಚ್ಚಾಗಿದೆ. ಇನ್ನು ಸಂಕಷ್ಟದಲ್ಲಿ ಸಹಾಯ ಮಾಡುತ್ತಿರುವ ನೆಚ್ಚಿನ ನಟನಿಗೆ ಧನ್ಯವಾದ ಸಲ್ಲಿಸಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಇನ್ನು ಸಹಾಯದ ನಿರೀಕ್ಷೆಯೊಂದಿಗೆ ಸೋನು ಸೂದ್ ಅವರನ್ನು ಭೇಟಿಯಾಗಲು ತೆಲಂಗಾಣದ ವೆಂಕಟೇಶ್ ಹರಿಜನ್ ಎಂಬ ಯುವಕ ಕಾಲ್ನಡಿಗೆ ಮೂಲಕ ತೆರಳಿದ್ದ. ಆತ ಗುರುವಾರದಂದು ಮುಂಬೈ ತಲುಪಿದ್ದು, ಈ ಚಿತ್ರವನ್ನು ಇನ್ಸ್ಟಾಗ್ರಾಂ ಮೂಲಕ ಸೋನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸೂದ್ "ವೆಂಕಟೇಶ್ ಇಲ್ಲಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಮಾಡಲು ನಾನು ಪ್ರಯತ್ನ ಮಾಡುತ್ತಿದ್ದರೂ ಆತ ಹೈದರಾಬಾದ್ನಿಂದ ಮುಂಬೈಗೆ ನನ್ನನ್ನು ಭೇಟಿಯಾಗಲು ಕಾಲ್ನಡಿಗೆ ಮೂಲಕ ಬಂದಿದ್ದಾನೆ. ಅವನು ನಿಜವಾಗಿಯೂ ಸ್ಪೂರ್ತಿದಾಯಕ ಮತ್ತು ನನ್ನನ್ನು ಅಪಾರವಾಗಿ ವಿನಮ್ರಗೊಳಿಸಿದ್ದಾನೆ " ಎಂದಿದ್ದಾರೆ.
ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ಭೇಟಿಯಾಗಲು ಬರುವ ಅಭಿಮಾನಿಗಳು ಕಷ್ಟ ತೆಗೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸುಮಾರು 16-18 ರಾಜ್ಯಗಳಲ್ಲ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದಾಗಿ ಸೂದ್ ಘೋಷಿಸಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಮತ್ತು ಕರ್ನೂಲ್ ನಗರಗಳ ಎರಡು ಸ್ಥಳಗಳಲ್ಲಿ ಈಗಾಗಲೇ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆಯು ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ಸೆಪ್ಟೆಂಬರ್ ವೇಳೆಗೆ ಎಲ್ಲ ರಾಜ್ಯಗಳಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.