ಜನವರಿ 31 ರಂದು ಬಿಡುಗಡೆಯಾದ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ, ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್'. ಆರಂಭದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯದಿದ್ದರೂ ನಂತರ ಚಿತ್ರ ಚೆನ್ನಾಗಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುವಂತೆ ಆಯ್ತು.
ಕೃಷ್ಣ, ಮಿಲನಾ ನಾಗರಾಜ್ ಜೊತೆ ಸೇರಿ ನಿರ್ಮಿಸಿರುವ ಈ ಸಿನಿಮಾ ತೆಲುಗಿನಲ್ಲಿ ರೀಮೇಕ್ ಆಗುತ್ತಿದ್ದು ತಮನ್ನಾ ಭಾಟಿಯಾ ಹಾಗೂ ಸತ್ಯದೇವ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ತಿಳಿದ ವಿಚಾರ. ಈ ತೆಲುಗು ಚಿತ್ರಕ್ಕೆ 'ಲವ್ ಮಾಕ್ಟೇಲ್' ಎಂಬ ಹೆಸರನ್ನೇ ಫೈನಲ್ ಮಾಡಬಹುದು ಎನ್ನಲಾಗಿತ್ತು. ಆದರೆ ಚಿತ್ರತಂಡ ಈ ಸಿನಿಮಾಗೆ ಹೊಸ ಹೆಸರನ್ನು ಫೈನಲ್ ಮಾಡಿದೆ. ಕನ್ನಡದ 'ಲವ್ ಮಾಕ್ಟೇಲ್' ಈಗ ತೆಲುಗಿನಲ್ಲಿ 'ಗುರ್ತುಂದಾ ಶೀತಕಾಲಂ' ಆಗಿ ತಯಾರಾಗಲಿದೆ.
ಚಿತ್ರವನ್ನು ನಾಗಶೇಖರ್ ಮೂವೀಸ್ ಬ್ಯಾನರ್ ಅಡಿ ನಾಗಶೇಖರ್ ನಿರ್ದೇಶಿಸುತ್ತಿದ್ದು ಭಾವನಾ ರವಿ ನಿರ್ಮಿಸುತ್ತಿದ್ದಾರೆ. ಚಿತ್ರೀಕರಣ ಆರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದರಿಂದ ಶೀಘ್ರವೇ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಆಡಿಯೋವನ್ನು ಕನ್ನಡ ಖ್ಯಾತ ಆಡಿಯೋ ಸಂಸ್ಥೆ ಆನಂದ್ ಆಡಿಯೋ 75 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಈ ಮೂಲಕ ಆನಂದ್ ಆಡಿಯೋ ಟಾಲಿವುಡ್ ಮಾರ್ಕೆಟ್ಗೂ ಕಾಲಿಟ್ಟಿದೆ.
ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಪುತ್ರ ಕಾಲಭೈರವ 'ಗುರ್ತುಂದಾ ಶೀತಕಾಲಂ' ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ನಾಗಶೇಖರ್, 'ತಮ್ನನ್ನಾ ಹಾಗೂ ಸತ್ಯದೇವ್ ಜೋಡಿಯನ್ನು ತೆರೆ ಮೇಲೆ ನೋಡಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಶೂಟಿಂಗ್ ಆರಂಭವಾಗುವ ಮುನ್ನವೇ ಆಡಿಯೋ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಚಿತ್ರಕ್ಕೆ ದೊರೆತ ಮೊದಲ ವಿಜಯ. ಆದಷ್ಟು ಬೇಗ ಚಿತ್ರೀಕರಣ ಆರಂಭಿಸಲಿದ್ದೇವೆ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕನ್ನಡದ 'ಲವ್ ಮಾಕ್ಟೇಲ್' ತೆಲುಗಿನಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.