'ಅವನೇ ಶ್ರೀಮನ್ನಾರಾಯಣ' ಚಿತ್ರದ ಸಾಹಸ ಸಂಯೋಜನೆಗಾಗಿ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ಗೊತ್ತೇ ಇದೆ. 2018 ರಲ್ಲಿ ಕೂಡಾ 'ಕೆಜಿಎಫ್ - 1' ಚಿತ್ರದ ಸಾಹಸ ಸಂಯೋಜನೆಗಾಗಿ ವಿಕ್ರಮ್ ಮೋರ್ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ಸತತ ಎರಡನೇ ಬಾರಿಗೆ ಅವರು ಪ್ರಶಸ್ತಿ ಗೆದ್ದಿದ್ದಾರೆ.
'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ಒಪ್ಪಿಕೊಳ್ಳಲು ಪ್ರಶಾಂತ್ ನೀಲ್ ಅವರೇ ಕಾರಣ ಎನ್ನುತ್ತಾರೆ ಎಂದು ವಿಕ್ರಮ್ ಮೋರ್ ಹೇಳುತ್ತಾರೆ. ಒಮ್ಮೆ ರಕ್ಷಿತ್ ಶೆಟ್ಟಿ ಪ್ರಶಾಂತ್‍ಗೆ ಫೋನ್ ಮಾಡಿ ನಮ್ಮ ಹೊಸ ಚಿತ್ರಕ್ಕೆ ಒಳ್ಳೆಯ ಸಾಹಸ ನಿರ್ದೇಶಕರನ್ನು ಹುಡುಕಿಕೊಡಿ ಎಂದು ಕೇಳಿದ್ದರಂತೆ. ಆಗ ಪ್ರಶಾಂತ್, ವಿಕ್ರಮ್ ಹೆಸರು ಹೇಳಿದ್ದಾರೆ. ಹೇಗೂ ವಿಕ್ರಮ್, 'ಕೆಜಿಎಫ್ 1' ಚಿತ್ರಕ್ಕೆ ಕೆಲಸ ಮಾಡಿದ್ದು, ಅವರ ಕೆಲಸವನ್ನು ಪ್ರತ್ಯಕ್ಷವಾಗಿ ನೋಡಿದ್ದಾರೆ ಪ್ರಶಾಂತ್. ವಿಕ್ರಮ್ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಹೆಸರನ್ನು ಹೇಳಿದರಂತೆ. ಅಷ್ಟೇ ಅಲ್ಲ, ರಕ್ಷಿತ್ ಶೆಟ್ಟಿ ಕಡೆಯಿಂದ ಹೊಸ ಚಿತ್ರವೊಂದಕ್ಕೆ ಕೆಲಸ ಮಾಡುವ ಬಗ್ಗೆ ಫೋನ್ ಬರಬಹುದು ಎಂದು ಹೇಳಿದ್ದರಂತೆ. ಕೊನೆಗೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ನಿರ್ದೇಶಕ ಸಚಿನ್, ವಿಕ್ರಮ್ಗೆ ಫೋನ್ ಮಾಡಿ ಚಿತ್ರಕ್ಕೆ ಯಾವೆಲ್ಲಾ ರೀತಿ ಫೈಟ್ಸ್ ಬೇಕು ಎಂದು ಅರ್ಥ ಮಾಡಿಸಿದರಂತೆ.