ಬಹುನಿರೀಕ್ಷಿತ 'ಸಾಹೋ' ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಈ ಮುನ್ನ ಹೇಳಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮತ್ತೆ ಮುಂದೂಡಿದೆ. ಸಿನಿಮಾ 15 ದಿನಗಳು ತಡವಾಗಿ ಬಿಡುಗಡೆಯಾಗಲಿದೆ.
ಮತ್ತೆ ಬಿಡುಗಡೆ ದಿನಾಂಕ ಮುಂದೂಡಿದ 'ಸಾಹೋ' ಚಿತ್ರತಂಡ...ಕಾರಣ ಇಷ್ಟೇ..! - undefined
ಪ್ರಭಾಸ್, ಶ್ರದ್ಧಾ ಕಪೂರ್ ಅಭಿನಯದ 'ಸಾಹೋ' ಸಿನಿಮಾ ಬಿಡುಗಡೆ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಚಿತ್ರ ನಿರ್ಮಾಣ ಸಂಸ್ಥೆ UV ಕ್ರಿಯೇಷನ್ಸ್ ಈ ವಿಷಯವನ್ನು ಸ್ಪಷ್ಟಪಡಿಸಿದೆ.
ಹಿಂದಿ, ತಮಿಳು, ತೆಲುಗು ಮೂರೂ ಭಾಷೆಗಳಲ್ಲಿ ಕೂಡಾ ಒಟ್ಟಿಗೆ ತಯಾರಾಗಿರುವ ಈ ಸಿನಿಮಾ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ಚಿತ್ರ ನಿರ್ಮಾಣ ಮಾಡಿರುವ UV ಕ್ರಿಯೇಷನ್ಸ್ ತನ್ನ ಟ್ವಿಟ್ಟರ್ ಅಕೌಂಟ್ ಮೂಲಕ ಸ್ಪಷ್ಟಪಡಿಸಿದೆ. 'ನಾವು ಸಿನಿಮಾ ಕ್ವಾಲಿಟಿ ವಿಚಾರದಲ್ಲಿ ಕಾಂಪ್ರಮೈಸ್ ಆಗಲು ಬಯಸುವುದಿಲ್ಲ. ಚಿತ್ರದಲ್ಲಿ ಹೆಚ್ಚಿನ ಆ್ಯಕ್ಷನ್ ದೃಶ್ಯಗಳಿದ್ದು ಇನ್ನೂ ಗ್ರಾಫಿಕ್ ಕೆಲಸ ಬಾಕಿ ಉಳಿದಿದೆ. ಇದಕ್ಕಾಗಿ ನಾವು ಸಮಯ ತೆಗೆದುಕೊಳ್ಳುತ್ತಿದ್ದೇವೆ. ಆದರೆ ಮತ್ತೆ ಯಾವುದೇ ಕಾರಣಕ್ಕೂ ದಿನಾಂಕ ಮುಂದೂಡಲಾಗುವುದಿಲ್ಲ. ಆಗಸ್ಟ್ 30 ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಧೃಡಪಡಿಸಿದೆ.
ಪ್ರಭಾಸ್, ಶ್ರದ್ಧಾ ಕಪೂರ್, ಜಾಕಿ ಶ್ರಾಫ್, ನೀಲ್ ನಿತಿನ್ ಮುಖೇಶ್, ಅರುಣ್ ವಿಜಯ್, ವೆನ್ನಿಲ ಕಿಶೋರ್, ಮುರಳಿ ಶರ್ಮಾ, ಪ್ರಕಾಶ್ ಬೆಳವಾಡಿ, ಚುಂಕಿ ಪಾಂಡೆ, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್, ಶರತ್ ಲೋಹಿತಾಶ್ವ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಕಥೆ, ಚಿತ್ರಕಥೆ ಬರೆದು ಸುಜಿತ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.