ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳನ್ನ ಮಾಡುವ ಮೂಲಕ ತನ್ನದೇ ಒಂದು ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ಪೋಷಕ ನಟ ರಾಕ್ಲೈನ್ ಸುಧಾಕರ್. ಸದಾ ಸಿನಿಮಾ ಬಗ್ಗೆ ಯೋಚನೆ ಮಾಡುತ್ತಿದ್ದ ರಾಕ್ಲೈನ್ ಸುಧಾಕರ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕೊನೆಗಳಿಗೆಯಲ್ಲಿ ಸಿನಿಮಾ ಶೂಟಿಂಗ್ಗೆ ಅಂತಾ ಹೋಗಿ ಮುಖಕ್ಕೆ ಬಣ್ಣ ಹಚ್ಚಬೇಕಾದರೆ ರಾಕ್ ಲೈನ್ ಸುಧಾಕರ್ ಎದೆಯನ್ನ ಹಿಡಿದುಕೊಂಡು ಕುಸಿದು ಬಿದ್ದರಂತೆ. ಅಷ್ಟೇ ಸುಧಾಕರ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಿಂದಲೇ ಹೆಚ್ಚು ಪ್ರಖ್ಯಾತಿ ಹೊಂದಿದ್ದ ಸಾಮಾನ್ಯ ಸುಧಾಕರ್. ರಾಕ್ ಲೈನ್ ಸುಧಾಕರ್ ಆಗಿದ್ದು ಹೇಗೆ, ರಾಕ್ಲೈನ್ ಎಂಬ ಹೆಸರು ಹೇಗೆ ಸುಧಾಕರ್ ಹೆಸರಿನ ಜೊತೆಗೆ ಸೇರಿಕೊಂಡಿತ್ತು? ಈ ಸುಧಾಕರ್ ಸಿನಿಮಾ ಜರ್ನಿ ಎಲ್ಲಿಂದ ಶುರುವಾಯಿತ್ತು ಎಂಬ ಇಂಟ್ರಸ್ಟ್ರಿಂಗ್ ಕಥೆಯನ್ನ ಹೇಳ್ತೇವಿ ಕೇಳಿ.
ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕ ಹಾಗೂ ನಟ ರಾಕ್ ಲೈನ್ ವೆಂಕಟೇಶ್ ಬಳಿ, ಕಳೆದ 32 ವರ್ಷಗಳಿಂದ ಕೆಲಸ ಮಾಡುವ ಮೂಲಕ ಸುಧಾಕರ್, ಕನ್ನಡ ಚಿತ್ರರಂಗದಲ್ಲಿ ರಾಕ್ ಲೈನ್ ಸುಧಾಕರ್ ಅಂತಾ ಪ್ರಖ್ಯಾತಿ ಹೊಂದುತ್ತಾರೆ. ಅಲ್ಲಿಂದಲೇ ಸುಧಾಕರ್ಗೆ ರಾಕ್ ಲೈನ್ ಎಂಬ ಹೆಸರು ಬಂತು.
ಇನ್ನು ರಾಕ್ ಲೈನ್ ಸಂಸ್ಥೆಯಲ್ಲಿ ಸಿನಿಮಾ ನಿರ್ಮಾಣ ಮೇಲ್ವಿಚಾರಣೆ ಕೆಲಸ ಮಾಡುತ್ತಿದ್ದ ಸುಧಾಕರ್, ತಮ್ಮ ಯಜಮಾನ ರಾಕ್ ಲೈನ್ ವೆಂಕಟೇಶ್ ಮೇಲೆ ಬೆಟ್ಟದಷ್ಟು ಅಭಿಮಾನ ಮತ್ತು ಗೌರವ ಹೊಂದಿದ್ದರು. ಎಷ್ಟರ ಮಟ್ಟಿಗೆ ಅಂದರೆ, ರಾಕ್ ಲೈನ್ ವೆಂಕಟೇಶ್ ಹತ್ತಿರ ಕೆಲಸ ಬಿಟ್ಟಿದ್ರು ಕೂಡಾ, ಅನ್ನ ಹಾಕಿದ ಧಣಿಗೆ ಯಾವುದೇ ಕೆಡು ಆಗಬಾರದು ಎಂಬ ಹೇಳುವ ವ್ಯಕ್ತಿ ರಾಕ್ ಲೈನ್ ಸುಧಾಕರ್.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮೇಲೆ ಸುಧಾಕರ್ ಇಟ್ಟಿರುವ ಪ್ರೀತಿ ಗೌರವಕ್ಕೆ ಸಾಕ್ಷಿ, ಈ ರೋಚಕ ಕಥೆ. ರಾಕ್ ಲೈನ್ ವೆಂಕಟಟೇಶ್ ತನ್ನ ಚರ್ಮ ಕಿತ್ತು ಚಪ್ಪಲಿ ಮಾಡಿಕೊಡುವಷ್ಟರ ಮಟ್ಟಿಗೆ ರಾಕ್ ಲೈನ್ ವೆಂಕಟೇಶ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರಂತೆ. ರಾಕ್ಲೈನ್ ವೆಂಕಟೇಶ್ ನನಗೆ ಅಂದಿಗೂ ಧಣಿಗಳು, ಇಂದಿಗೂ ಅವರ ಮೇಲೆ ಸಂಪೂರ್ಣ ಗೌರವ ಇದೆ. ಈ ಗೌರವ ಎಷ್ಟು ಅಂದರೆ ಅವರಿಗಾಗಿ ನಾನು ಪ್ರಾಣ ಕೊಡಲು ಸಿದ್ದ. ಅವರಿಗೆ ಕೇಡು ಆಗಬಾರದು. ಅವರು ಉನ್ನತ ಸ್ಥಾನ ಏರಿದ್ದಾರೆ ಅವರು ಹಾಗೆ ಇರುವುದನ್ನು ನನ್ನ ಜೀವ ಇರುವವರೆಗೂ ಬಯಸುವವನು ನಾನು. ನನ್ನದು ಅನ್ನದ ಋಣ. ಅವರಿಂದ ನಾನು ಆಸ್ತಿ ಪಾಸ್ತಿ ಮಾಡಿಲ್ಲ. ಆದರೆ ಬರೋಬ್ಬರಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ನನಗೆ ಜನಪ್ರಿಯತೆ, ಹಣ, ಅಂತಸ್ತು, ಗೌರವ ನೀಡಿದೆ ಎಂದಿ ಸುಧಾಕರ್ ಹೇಳಿಕೊಂಡಿದ್ದರು.
ರಾಕ್ ಲೈನ್ ವೆಂಕಟೇಶ್ ಹಾಗೂ ಸುಧಾಕರ್ ನಡುವೆ ಇದ್ದಿದ್ದು ರಾಮ - ಹನುಮಂತನ ಪ್ರೀತಿ. ಸಾಕಷ್ಟು ಬಾರಿ ರಾಕ್ ಲೈನ್ ಸುಧಾಕರ್, ರಾಕ್ ಲೈನ್ ಸಂಸ್ಥೆಗಾಗಿ ರಾತ್ರಿ, ಹಗಲು ಎನ್ನದೆ ದುಡಿದಿದ್ದಾರಂತೆ. ಅದಕ್ಕೆ ಒಂದು ತಾಜಾ ಉದಹಾರಣೆ ಈ ಘಟನೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿರು ಸಿನಿಮಾವನ್ನ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದಲ್ಲಿ ನಟಿ ಸೌಂದರ್ಯ ಅಭಿನಯಿಸಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಸಿನಿಮಾ ಚಿತ್ರೀಕರಣದ ವೇಳೆ ನಟಿ ಸೌಂದರ್ಯ ಶೂಟಿಂಗ್ ಬಂದಿರಲಿಲ್ವಂತೆ. ಆಗ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಯಾಕೇ ಸೌಂದರ್ಯ ಸಿನಿಮಾ ಶೂಟಿಂಗ್ ಬಂದಿಲ್ಲ ಅಂತಾ ಹೇಳಿ, ಏನಾಗಿದೆ ಅಂತಾ ಅಂದು ಸುಧಾಕರ್ ಅವರನ್ನು ಚೆನ್ನೈಗೆ ಕಳುಹಿಸಿ ಕೊಡ್ತಾರೆ. ಆಗ ಸುಧಾಕರ್ಗೆ ಒಂದು ಅಚ್ಚರಿ ಕಾದಿರುತ್ತೆ.
ಅದೆನಾಪ್ಪ ಅಂದ್ರೆ ರಜನಿಕಾಂತ್ ಅಭಿನಯದ ಪಡಿಯಪ್ಪ ಸಿನಿಮಾ ಶೂಟಿಂಗ್ನಲ್ಲಿ ನಟಿ ಸೌಂದರ್ಯ ಬ್ಯುಸಿಯಾಗಿರುತ್ತಾರೆ. ಆದರೆ ಕಾಲ್ ಶೀಟ್ ಮಾತ್ರ ರಾಕ್ ಲೈನ್ ಸಂಸ್ಥೆಗೆ ಇತ್ತು. ಆದರೆ ಸುಧಾಕರ್ ಈ ವಿಷ್ಯವನ್ನ ರಾಕ್ ಲೈನ್ ವೆಂಕಟೇಶ್ ಗೆ ತಿಳಿಸದೆ, ಸೌಂದರ್ಯ ಉಳಿದುಕೊಂಡಿದ್ದ, ಹೋಟೆಲ್ ಹೊರಗಡೆ ನಿಂತುಕೊಂಡು, ಸೌಂದರ್ಯ ಬರುವುದನ್ನೇ ಕಾಯುತ್ತಾರೆ. ಆದರೆ ಪ್ರಯೋಜನ ಆಗಲಿಲ್ಲ. ಆಗ ಸ್ವತಃ ನಿರ್ದೇಶಕ ರವಿ ಕುಮಾರ್ ಅವರು ಬಂದು ಕೇಳಿಕೊಂಡರು ಸುಧಾಕರ್ ಅಲುಗಾಡಲೆ ಇಲ್ಲ. ನಿಮ್ಮ ಸಿನಿಮಾ ಶೂಟಿಂಗ್ ನಿಮಗೆ, ನಮ್ಮ ಕನ್ನಡ ಸಿನಿಮಾ ಶೂಟಿಂಗ್ ನಮಗೆ. ನಾನು ಸೌಂದರ್ಯ ಅವರನ್ನು ಕರೆದುಕೊಂಡು ಹೋಗಲೇಬೇಕು ಎಂದು ಹಟ ಹಿಡಿದಿದ್ದಾರೆ.
ಅಷ್ಟು ಹೊತ್ತಿಗೆ ರಜನಿಕಾಂತ್ , ರಾಕ್ ಲೈನ್ ವೆಂಕಟೇಶ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಹೋಟೆಲ್ ರೂಮ್ಗೆ ಬಂದು ಫೋನ್ ಸ್ವೀಕರಿಸಲು ಒಪ್ಪದ ಸುಧಾಕರ್, ಹೊರಗಡೆ ಇರುವ ಬೂತ್ ಫೋನ್ ನಲ್ಲೇ ರಾಕ್ಲೈನ್ ಜೊತೆ ಮಾತನಾಡಿ ಇರುವ ವಿಷ್ಯವನ್ನ ತಿಳಿಸಿದ್ರಂತೆ. ಇಷ್ಟರ ಮಟ್ಟಿಗೆ ಸುಧಾಕರ್ ರಾಕ್ ಲೈನ್ ವೆಂಕಟೇಶ್ಗೆ ತುಂಬಾ ನಂಬಿಕಸ್ಥರಾಗಿದ್ರು ಅನ್ನೋದಕ್ಕೆ ಈ ಘಟನೆ ಸಾಕ್ಷಿ.
ಹೀಗೆ ರಾಕ್ ಲೈನ್ ವೆಂಕಟೇಶ್ ಬಳಿ ರಾಮನ ಬಂಟ ಹನುಮಂತನ ತರಹ ಇದ್ದ ರಾಕ್ ಲೈನ್ ಸುಧಾಕರ್ ವಯಕ್ತಿಕ ಕಾರಣಕ್ಕಾಗಿ ರಾಕ್ ಲೈನ್ ವೆಂಕಟೇಶ್ ಬಳಿ ಕೆಲಸ ಬಿಡುತ್ತಾರೆ. ಅಲ್ಲಿಂದ ರಾಕ್ ಲೈನ್ ಸುಧಾಕರ್ ಅಭಿನಯ ಮಾಡೋದಕ್ಕೆ ಶುರು ಮಾಡ್ತಾರೆ. ನಿರ್ದೇಶಕ ಯೋಗರಾಜ್ ಭಟ್ ಪಂಚರಂಗಿ ಸಿನಿಮಾದಲ್ಲಿ ರಾಕ್ಲೈನ್ ಸುಧಾಕರ್ಗೆ ಕುರುಡನ ಪಾತ್ರ ಕೊಡ್ತಾರೆ. ಆ ಚಿತ್ರದ ಅಭಿನಯದಿಂದ ರಾಕ್ ಲೈನ್ ಸುಧಾಕರ್ ಫುಲ್ ಟೈಮ್ ಪೋಷಕ ನಟರಾಗಿ ಪ್ರಖ್ಯಾತಿ ಹೊಂದುತ್ತಾರೆ.
ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿರುವ ರಾಕ್ ಲೈನ್ ಸುಧಾಕರ್ ಇನ್ನು ನೆನಪು ಮಾತ್ರ. ಸದ್ಯ ಬಸವೇಶ್ವರ ನಗರದಲ್ಲಿರೋ ನಿವಾಸಕ್ಕೆ ರಾಕ್ ಲೈನ್ ಸುಧಾಕರ್ ಪಾರ್ಥೀವ ಶರೀರ ತಂದಿದ್ದು ನಾಳೆ ದೇವಯ್ಯ ಪಾರ್ಕ್ನಲ್ಲಿರುವ ಹರಿಶ್ವಂದ್ರ ಘಾಟ್ನಲ್ಲಿ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ನಿರ್ಧಾರಿಸಿದೆ.