ಬಣ್ಣದ ಲೋಕ ಸಿನಿಮಾ ರಂಗದಲ್ಲಿ ಒಮ್ಮೆ ಸ್ಟಾರ್ ಮಿಂಚಿದ್ರೆ ಸಾಕು ಅವರ ಸುತ್ತಮುತ್ತ ದೊಡ್ಡ ಅಭಿಮಾನಿಗಳ ಬಗಳ, ಸ್ಟಾರ್ಡಮ್ ಹುಟ್ಟಿಕೊಳ್ಳುತ್ತೆ. ಇದೇ ಸ್ಟಾರ್ ವ್ಯಾಲ್ಯೂಯಿಂದ ಅದೆಷ್ಟೋ ನಟ-ನಟಿಯರು ರಾಜಕೀಯಕ್ಕೆ ಬಂದು ಸಕ್ಸಸ್ಫುಲ್ ಆಗಿದ್ದಾರೆ.
ಕನ್ನಡ ಚಿತ್ರರಂಗದಿಂದ ರಾಜಕಾರಣಕ್ಕೆ ಕಾಲಿಟ್ಟು, ಚಿತ್ರರಂಗದ ಚಕ್ಕಡಿಯ ಜೊತೆ ಜೊತೆಗೆ ರಾಜಕಾರಣವನ್ನೂ ಸಲೀಸಾಗಿ ಸಾಗಿಸಿಕೊಂಡು ಹೋದವರು ಹಲವಾರು ಮಂದಿ ನಾಯಕರು. ನಾಯಕರು ಮಾತ್ರವಲ್ಲದೇ ನಾಯಕಿಯರೂ ಸಹ ರಾಜಕೀಯ ವಲಯಕ್ಕೆ ಬಂದು ಛಾಪು ಮೂಡಿಸಿದ್ದಾರೆ. ಹಾಗಾದ್ರೆ ಸ್ಯಾಂಡಲ್ವುಡ್ನ ಯಾರೆಲ್ಲ ನಟಿಮಣಿಯರು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ ಎಂಬ ಇಂಟ್ರಸ್ಟ್ರಿಂಗ್ ಮಾಹಿತಿ ಇಲ್ಲಿದೆ.
ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ಕ್ವೀನ್ ಆಗಿ ಮೆರೆದವರು ನಟಿ ರಮ್ಯಾ. ಅಭಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಮ್ಯಾ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸೂಪರ್ ಹಿಟ್ ಸಿನಿಮಾ ಕೊಟ್ಟ ಮೋಹಕ ತಾರೆ. ಯಾವಾಗ ಸಿನಿಮಾ ಸಾಕು ಅನ್ನಿಸೋದಿಕ್ಕೆ ಶುರುವಾಯಿತೋ ಆಗ ರಮ್ಯಾ, ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. 2012ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ ರಮ್ಯಾ, ಮಂಡ್ಯ ಕ್ಷೇತ್ರದಿಂದ ಸಂಸದ ಕೂಡ ಆದರು.
ನಟಿ, ರಾಜಕಾರಣಿ ಸುಮಲತಾ ಅಂಬರೀಷ್ ಸದ್ಯ ಈ ಬಾರಿಯ ಚುನಾವಣೆಯಲ್ಲಿ ಸಂಸದ ಆಗಿ ಆಯ್ಕೆಯಾದ ಸ್ಟಾರ್ ನಟಿ ಅಂದರೆ ಅದು ಸುಮಲತಾ ಅಂಬರೀಷ್. ರೆಬಲ್ಸ್ಟಾರ್ ಅಂಬರೀಷ್ ನಿಧನದ ಬಳಿಕ ಮಂಡ್ಯ ಜನತೆಗಾಗಿ ಅವರು ರಾಜಕೀಯಕ್ಕೆ ಬರಬೇಕಾಯ್ತು. 2019ರ ಮಾರ್ಚ್ ತಿಂಗಳು ಸುಮಲತಾ ಅಂಬರೀಷ್ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸಂಸದೆ ಆಗಿದ್ದು ರೋಚಕ.
ಇನ್ನು ಡಾ. ರಾಜ್ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್ ಹೀಗೆ... ಕನ್ನಡದ ಬಹುತೇಕ ನಟರ ಜೊತೆ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ನಟಿ ತಾರಾ ಅನುರಾಧ. ತಾರಾ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ನಂತರ ರಾಜಕೀಯಕ್ಕೆ ಬಂದ್ರು. ಸದ್ಯ ಬಿಜೆಪಿ ಪಕ್ಷದಿಂದ ವಿಧಾನಪರಿಷತ್ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ.
ಮುಂಗಾರು ಮಳೆ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಪೂಜಾಗಾಂಧಿ ಕೂಡ ಈ ಕ್ಷೇತ್ರದಿಂದ ಹಿಂದೆ ಬಿದ್ದವರಲ್ಲ. ಮೊದಲು ಜಾತ್ಯಾತೀತ ಜನತಾದಳ ನಂತರ ಕೆಜೆಪಿ ಕೊನೆಗೆ ಬಿಎಸ್ಆರ್ ಅಂತ ಪಕ್ಷದಿಂದ ಪಕ್ಷಕ್ಕೆ ಹಾರಿದ ಈ ಮಳೆ ಹುಡುಗಿ ಪೂಜಾ, ಸದ್ಯ ರಾಜಕೀಯ ಮತ್ತು ಸಿನಿಮಾ ಎರಡನ್ನೂ ನಿಭಾಯಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪೋಷಕನಟ ಪಾತ್ರಗಳಿಗೆ ಜೀವ ತುಂಬಿ ತನ್ನದೇಯಾದ ಛಾಪು ಮೂಡಿಸಿದವರು ನಟಿ ಉಮಾಶ್ರೀ. 400ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಉಮಾಶ್ರೀ, 2013ರಲ್ಲಿ ರಾಜಕೀಯ ಪ್ರವೇಶಿಸಿದ್ರು. ಮಾಜಿ ಸಿಎಂ ಸಿದ್ಧರಾಮಯ್ಯ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಐದು ವರ್ಷ ಸೇವೆ ಸಲ್ಲಿಸಿದ್ದರು.
ಇನ್ನು ಸ್ಯಾಂಡಲ್ವುಡ್ನಲ್ಲಿ ಕ್ರೇಜಿ ಕ್ವೀನ್ ಆಗಿ ಮೆರೆದ ನಟಿ ರಕ್ಷಿತಾ ಪ್ರೇಮ್ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡವರು. ಕನ್ನಡ, ತೆಲುಗು ಭಾಷೆಯಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ ರಕ್ಷಿತಾ ಕೂಡ ಬಿಎಸ್ಆರ್ ಪಕ್ಷದ ಮೂಲಕ 2012ರಲ್ಲಿ ತಮ್ಮ ರಾಜಕೀಯ ಜೀವನ ಶುರು ಮಾಡಿದವರು. ಬಳಿಕ ಜಾತ್ಯಾತೀತ ಜನತಾದಳಕ್ಕೆ ಬಂದ ರಕ್ಷಿತಾ, ಸದ್ಯ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.
ಅರವತ್ತರ ದಶಕದಲ್ಲಿ ತನ್ನ ಸೌಂದರ್ಯದಿಂದಲೇ ಮೋಡಿ ಮಾಡಿದ್ದು ನಟಿ ಜಯಮಾಲಾ. ರಾಜ್ಕುಮಾರ್, ಟೈಗರ್ ಪ್ರಭಾಕರ್, ಅಂಬರೀಷ್ ಅವರತಂಹ ನಟರ ಜೊತೆ ಮಿಂಚಿದ ಜಯಮಾಲಾ ಕೂಡ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯೆ ಆಗಿದ್ದಾರೆ. ಕಳೆದ ರಾಜ್ಯ ಸರ್ಕಾರದಲ್ಲಿ ಇವರು ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದರು.
ಸಂಸಾರಿಕ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಸಿನಿಮಾ ಪ್ರೇಕ್ಷಕರ ಮನಗೆದ್ದವರು ನಟಿ ಶೃತಿ. ಅಂದಿನ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಮಿಂಚಿದ ಶೃತಿ, ಮೊದಲು ಬಿಜೆಪಿ ಪಕ್ಷಕ್ಕೆ ಸೇರಿಕೊಂಡ್ರು. ಬಳಿಕ ರಾಜ್ಯ ರಾಜಕೀಯದ ಚಿತ್ರಣ ಬದಲಾಗಿದ್ದರಿಂದ ಯಡಿಯೂರಪ್ಪನವರ ಫಾಲೋವರ್ ಆಗಿದ್ದ ಶೃತಿ, ಯಡಿಯೂರಪ್ಪನವರು ಕಟ್ಟಿದ ಕೆಜೆಪಿ ಪಕ್ಷ ಸೇರಿಕೊಂಡರು. ಆದರೆ, ಆ ನಂತರ ಕೆಜೆಪಿ ಪಕ್ಷ ಕೂಡ ಬಿಜೆಪಿ ಪಕ್ಷದಲ್ಲಿ ವಿಲೀನವಾಯಿತು. ಈಗ ಬಿಜೆಪಿ ಪಕ್ಷದಲ್ಲಿ ಶೃತಿ ಗುರುತಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಚಂದ್ರಮುಖಿಯಾಗಿ ಗಮನ ಸೆಳೆದವರು ನಟಿ ಭಾವನಾ. ಬೋಲ್ಡ್ ನಟನೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಇಂಪ್ರೆಸ್ ಮಾಡಿದ ಭಾವನಾ ಕೂಡ 2013ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ರು. ಈಗ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.