ತಂದೆ ತಾಯಿ ಯಾವ ಕ್ಷೇತ್ರದಲ್ಲಿರುತ್ತಾರೋ ಮಕ್ಕಳು ಕೂಡಾ ಅದೇ ಕ್ಷೇತ್ರಕ್ಕೆ ಬರುವುದು ಸಾಮಾನ್ಯ. ಸಿನಿಮಾರಂಗ ಕೂಡಾ ಇದಕ್ಕೆ ಹೊರತಾಗಿಲ್ಲ. ಪೋಷಕರಂತೆ ಮಕ್ಕಳು ಕೂಡಾ ಆ್ಯಕ್ಟಿಂಗ್, ಸಂಗೀತ ನಿರ್ದೇಶನ, ಹಿನ್ನೆಲೆ ಗಾಯನವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಕೂಡಾ ಗಳಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್.
ಅರುಣ್ ಸಾಗರ್ ಕಲಾ ನಿರ್ದೇಶಕ, ನಟನಾಗಿ ಹೆಸರು ಮಾಡಿದ್ದರೆ ಅವರ ಪುತ್ರಿ ಅದಿತಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅದಿತಿಗೆ ಬಾಲ್ಯದಿಂದಲೂ ಸಂಗೀತ ಎಂದರೆ ಬಹಳ ಇಷ್ಟ. ಜೊತೆಗೆ ಆಕೆ ಬಿ.ವಿ. ಕಾರಂತ್ ಅವರ ದೊಡ್ಡ ಅಭಿಮಾನಿ. ಬಿ.ವಿ. ಕಾರಂತರ ಹುಟ್ಟುಹಬ್ಬದಂದು ಅದಿತಿ ಹಾಡಿದ್ದ ಪುರಂದರ ದಾಸರ ಆಚಾರವಿಲ್ಲದ ನಾಲಿಗೆ...ಹಾಡನ್ನು ಕೇಳಿದ್ದ ನಿರ್ದೇಶಕ ತರುಣ್ ಸುಧೀರ್ ಆಕೆಯನ್ನು ಅರ್ಜುನ್ ಜನ್ಯ ಅವರಿಗೆ ಪರಿಚಯಿಸುತ್ತಾರೆ. ಇದರಿಂದ ಅದಿತಿಗೆ ರ್‍ಯಾಂಬೋ-2 ಚಿತ್ರದ ಧಮ್ ಮಾರೋ ಧಮ್... ಹಾಡು ಹಾಡಲು ಅವಕಾಶ ದೊರೆಯಿತು. ಇದಾದ ನಂತರ ಅದಿತಿ ಕಥಾ ಸಂಗಮ, ಕವಲುದಾರಿ, ಸಂಹಾರಿಣಿ, ಫ್ರೆಂಚ್ ಬಿರಿಯಾನಿ ಸೇರಿ ಸುಮಾರು 17 ಸಿನಿಮಾಗಳಲ್ಲಿ ಹಾಡಿದ್ದಾರೆ.