ಕೋವಿಡ್ ಮೂರನೇ ಅಲೆಯ ಆತಂಕ ಹಿನ್ನೆಲೆ ರಾಜ್ಯ ಸರ್ಕಾರ ಶುಕ್ರವಾರದಿಂದಲೇ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಇದರಿಂದ ಚಿತ್ರರಂಗದವರಿಗೆ ಆತಂಕ ಶುರುವಾಗಿದೆ. ಮತ್ತೊಮ್ಮೆ ಲಾಕ್ ಡೌನ್ ಮಾಡಿದ್ರೆ ಏನು ಕಥೆ ಎಂಬ ಚಿಂತೆ ಕಾಡತೊಡಗಿದೆ.
ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಲಾಕ್ಡೌನ್ ಕಾರಣ ಚಿತ್ರರಂಗದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಅದರಲ್ಲೂ ಎರಡನೇ ಅಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗ, ಅನ್ಲಾಕ್ ಬಳಿಕ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಮೂರನೇ ಅಲೆಯ ಮುನ್ಸೂಚನೆ ಗೋಚರಿಸುತ್ತಿದೆ.
ಚಿತ್ರಮಂದಿರಗಳಿಗೆ ತೆರಿಗೆ ವಿನಾಯಿತಿ ದೊರೆತು ಇನ್ನೂ ಒಂದು ತಿಂಗಳು ಸಹ ಆಗಿಲ್ಲ. ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕರೂ, ಮೊದಲ ಮೂರು ವಾರ ಯಾವುದೇ ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗಲಿಲ್ಲ. ಆಗಸ್ಟ್ 6ರಂದು 'ಕಲಿವೀರ' ಬಿಡುಗಡೆಯಾಗಿದೆ. ಸಲಗ, ನಿನ್ನ ಸನಿಹಕೆ, ಜೀವ್ನಾನೇ ನಾಟ್ಕ ಸಾಮಿ, ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬುಟ್ಟ ಮುಂತಾದ ಹಲವು ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದು, ಬಿಡುಗಡೆ ದಿನಾಂಕವನ್ನು ಸಹ ಘೋಷಿಸಿವೆ.
ಓದಿ : ಹೊಸ ಪ್ರತಿಭೆಗಳ 'ಗ್ರೂಫಿ' ಸಿನಿಮಾಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಪೋರ್ಟ್
ಹೀಗಿರುವಾಗ, ಸರ್ಕಾರ ನೈಟ್ ಕರ್ಫ್ಯೂ ಘೋಷಿಸಿದ್ದರಿಂದ ಚಿತ್ರರಂಗದಲ್ಲಿ ಆತಂಕ ಶುರುವಾಗಿದೆ. ಮೇಲೆ ಹೇಳಿದ ಯಾವುದೇ ಚಿತ್ರಕ್ಕೂ ನೈಟ್ ಕರ್ಫ್ಯೂದಿಂದ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ, ಈಗ ನೈಟ್ ಕರ್ಫ್ಯೂ ಘೋಷಿಸಿರುವ ಸರ್ಕಾರ, ಮುಂದಿನ ದಿನಗಳಲ್ಲಿ ಲಾಕ್ಡೌನ್ ಮಾಡಿದರೆ ಕಥೆ ಏನು ಎಂಬ ಪ್ರಶ್ನೆ ಎಲ್ಲರದ್ದು.
ಒಂದು ವೇಳೆ ಲಾಕ್ಡೌನ್ ಘೋಷಣೆಯಾದರೆ, ಚಿತ್ರ ಬಿಡುಗಡೆ ಮುಂದೂಡಬಹುದು. ಚಿತ್ರ ಬಿಡುಗಡೆಯಾದ ಮೇಲೆ ಲಾಕ್ಡೌನ್ ಘೋಷಣೆಯಾದರೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಭಯ ಚಿತ್ರ ನಿರ್ಮಾಪಕರದ್ದು. ಕಳೆದ ಬಾರಿ ಲಾಕ್ಡೌನ್ ವೇಳೆ 'ಯುವರತ್ನ' ಚಿತ್ರಕ್ಕೆ ಇದೇ ಸಂಕಷ್ಟ ಎದುರಾಗಿತ್ತು. ಚಿತ್ರ ಬಿಡುಗಡೆಯಾಗಿ ಒಂದು ವಾರದಲ್ಲಿ ಲಾಕ್ಡೌನ್ ಘೋಷಿಸಿದ್ದರಿಂದ, ಚಿತ್ರತಂಡದವರು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಅಂಥದ್ದೊಂದು ಸಮಸ್ಯೆ ಮತ್ತೊಮ್ಮೆ ಮರುಕಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಪ್ರಸ್ತುತ, ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸೆಪ್ಟಂಬರ್ನಲ್ಲಿ ಮೂರನೇ ಅಲೆ ಎದುರಾಗಬಹುದು ಎಂದು ಈಗಾಗಲೇ ಹಲವು ಆರೋಗ್ಯ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ ಮೂರನೇ ಅಲೆಯ ಮುನ್ಸೂಚನೆ ಗೋಚರಿಸುತ್ತಿದೆ. ಈ ರಾಜ್ಯಗಳಲ್ಲಿ ತೀವ್ರ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗ್ತಿವೆ. ಈ ಎಲ್ಲಾ ಬದಲಾವಣೆಗಳು ಚಿತ್ರರಂಗದವರನ್ನು ಚಿಂತೆಗೆ ದೂಡಿದೆ.