ತೆಲಂಗಾಣ: ಇತ್ತೀಚೆಗೆ ಮಂಡ್ಯ ಜನತೆ ರೆಬಲ್ ಸ್ಟಾರ್ ಅಂಬರೀಶ್ಗಾಗಿ ಗುಡಿಯೊಂದನ್ನು ಕಟ್ಟಿದ್ದರು. ಅಂಬರೀಶ್ 2ನೇ ವರ್ಷದ ಪುಣ್ಯಸ್ಮರಣೆಯಂದು ಸುಮಲತಾ ಮಂಡ್ಯದಲ್ಲಿ ಅಂಬರೀಶ್ ಪುತ್ಥಳಿಯನ್ನು ಉದ್ಘಾಟಿಸಿದ್ದರು. ಇದೀಗ ತೆಲಂಗಾಣದ ಜನತೆ ಕೊರೊನಾ ಸಮಯದಲ್ಲಿ ನೂರಾರು ಜನರಿಗೆ ಸಹಾಯ ಮಾಡಿದ್ದ ರಿಯಲ್ ಹೀರೋ ಸೋನು ಸೂದ್ ಅವರಿಗೆ ಗುಡಿಯೊಂದನ್ನು ಕಟ್ಟಿಸಿದ್ದಾರೆ.
ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ದುಬ್ಬಾ ತಾಂಡಾದ ಜನರು ಮೆಚ್ಚಿನ ನಟನಿಗಾಗಿ ಗುಡಿಯೊಂದನ್ನು ಕಟ್ಟುವ ಮೂಲಕ ಅಭಿಮಾನ ಮೆರೆದಿದ್ದಾರೆ. ಅಷ್ಟೇ ಅಲ್ಲ, ಬಡವರ ಪಾಲಿನ ಬಂಧುವಾದ ಸೋನುಸೂದ್ಗೆ ಜನರು ಪ್ರತಿದಿನ ಪೂಜೆ ಮಾಡುತ್ತಾರಂತೆ. "ಸೋನು ಸೂದ್ ಕೊರೊನಾ ಲಾಕ್ಡೌನ್ ಸಮಯದಲ್ಲಿ ಮುಂಬೈನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಹೋಗಲು ಬಸ್ ವ್ಯವಸ್ಥೆ ಮಾಡಿದ್ದರು. ಅಲ್ಲಿಂದ ಸುಮಾರು 20 ಸಾವಿರ ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ, ರೈತರೊಬ್ಬರಿಗೆ ಟ್ರ್ಯಾಕ್ಟರ್ ಕೊಡಿಸುವುದು, ಬಾಲಕನ ಶಸ್ತ್ರಚಿಕಿತ್ಸೆಗೆ ಹಣ ಸಹಾಯ, ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಸೇರಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಆದ ಕಾರಣ ನಾವು ಅವರಿಗೆ ಗುಡಿ ಕಟ್ಟಿ ಪೂಜಿಸುತ್ತಿದ್ದೇವೆ. ಸಿದ್ದಿಪೇಟೆ ಹಾಗೂ ಸುತ್ತಮುತ್ತಲಿನ ಸುಮಾರು 18 ಹಳ್ಳಿಗಳಿಗೆ ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲ. ಸೋನು ಸೂದ್ ನಮಗೂ ಸಹಾಯ ಮಾಡುತ್ತಾರೆ. ನಮ್ಮ ಹಳ್ಳಿಗೆ ಭೇಟಿ ನೀಡುವ ಭರವಸೆಯಲ್ಲಿದ್ದೇವೆ" ಎಂದು ತಾಂಡಾ ಜನರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.