ದ್ವಿಪಾತ್ರದಲ್ಲಿ ತೇಜಸ್ ಗೌಡ ನಟನೆಗೆ ಸೈ ಎಂದ ಪ್ರೇಕ್ಷಕರು
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಅಜಯ್ ಮತ್ತು ವಿಜಯ್ ಎಂಬ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಮುದ್ದು ಮುಖದ ಚೆಲುವನ ಹೆಸರು ತೇಜಸ್ ಗೌಡ.
ಬೆಂಗಳೂರು:ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಅಜಯ್ ಮತ್ತು ವಿಜಯ್ ಎಂಬ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಮುದ್ದು ಮುಖದ ಚೆಲುವನ ಹೆಸರು ತೇಜಸ್ ಗೌಡ.
ಮಲೆನಾಡಿನ ಕುವರ ತೇಜಸ್ ಗೌಡ ಎಂಟೆಕ್ ಪದವೀಧರರೂ ಹೌದು. ಪದವಿ ವಿದ್ಯಾಭ್ಯಾಸದ ನಂತರ ದಾವಣಗೆರೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಶುರು ಮಾಡಿದ್ದಾಯಿತು. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟಿವ್ ಆಗಿದ್ದ ಕಾರಣ ಆಗಾಗ ಫೇಸ್ಬುಕ್ನಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. ಆಗ ಪರಿಚಯ ಆದವರೇ ಒನ್ ಟೈಮ್ ಸಿನಿಮಾ ನಿರ್ದೇಶಕ ರಾಜು. ಅವರ ನಿರ್ದೇಶನದ "ಒನ್ ಟೈಮ್" ಸಿನಿಮಾದಲ್ಲಿ ಭಗವಾನ್, ಕೆಎಸ್ಎಲ್ ಸ್ವಾಮಿ, ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಟಿ.ಎಸ್.ನಾಗಾಭರಣ ಸೇರಿ 15 ಮಂದಿ ನಿರ್ದೇಶಕರು ಸಹನಟರಾಗಿ ನಟಿಸಿದ್ದರು. ಅದರಲ್ಲಿ ನಾಯಕ ಆಗಿ ನಟಿಸಿದ್ದೇ ಮಲೆನಾಡಿನ ಕುವರ ತೇಜಸ್ ಗೌಡ! ಅದ್ಯಾವಾಗ ಅದರಲ್ಲಿ ನಟಿಸುವ ಅವಕಾಶ ದೊರೆಯಿತೋ, ಕೆಲಸಕ್ಕೆ ಬಾಯ್ ಹೇಳಿ ನಟನೆಗೆ ಹಾಯ್ ಮಾಡಿದರು.
ತಮಿಳಿನ ಕಲ್ಯಾಣಂ ಕಲ್ಯಾಣಂ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ತೇಜಸ್ ಮುಂದೆ ತೆಲುಗಿನ ಮನಸೈ ಮನಸೈನಲ್ಲಿ ಅಭಿನಯಿಸಿದರು. ತೆಲುಗು, ತಮಿಳು ಭಾಷೆಯ ಕಿರುತೆರೆಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲಿ ನಟನಾ ಛಾಪು ಮೂಡಿಸಿದ ತೇಜಸ್ ಅವರು ಕನ್ನಡ ಕಿರುತೆರೆಗೆ ಕಾಲಿಡಲು ಮೈಸೂರು ಮಂಜು ಕಾರಣ. ಮೈಸೂರು ಮಂಜು ನಿರ್ದೇಶನದ ಅಗ್ನಿಸಾಕ್ಷಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿತ್ತು. ಅಂತಹ ಹೆಸರಾಂತ ನಿರ್ದೇಶಕ ಮತ್ತು ನಿರ್ಮಾಣದ ಧಾರಾವಾಹಿಯಲ್ಲಿ ನಟಿಸುವುದು ಒಂದು ಭಾಗ್ಯವೇ ಸರಿ ಎಂದು ದ್ವಿಪಾತ್ರದಲ್ಲಿ ನಟಿಸಲು ಒಪ್ಪಿಕೊಂಡರು ತೇಜಸ್ ಗೌಡ.
ತೇಜಸ್ ಗೌಡರನ್ನು ಒಂದು ಕ್ಷಣ ನೋಡಿದಾಗ ತಮಿಳಿನ ಹೆಸರಾಂತ ನಟ ಅಜಿತ್ ಅವರ ನೆನಪಾಗುವುದು ನಿಜ. ಜ್ಯೂನಿಯರ್ ಅಜಿತ್ ಎಂದೇ ಜನಪ್ರಿಯ ಆಗಿರುವ ತೇಜಸ್ ಗೌಡಗೆ ವರನಟ ಡಾ. ರಾಜ್ಕುಮಾರ್ ಎಂದರೆ ಪ್ರಾಣ. ಬಾಲ್ಯದಿಂದಲೂ ಅವರ ನಟನೆಯನ್ನು ನೋಡಿ ಬೆಳದಿರುವ ತೇಜಸ್ ಗೌಡ ಇದೀಗ ಅಜಯ್ ಮತ್ತು ವಿಜಯ್ ಆಗಿ ಕನ್ನಡ ಕಿರುತೆರೆ ಪ್ರಿಯರ ಗಮನ ಸೆಳೆಯುತ್ತಿರುವುದಂತೂ ನಿಜ.