ಬೆಂಗಳೂರು: ಸ್ಥಗಿತಗೊಂಡಿದ್ದ ಧಾರಾವಾಹಿ ಚಿತ್ರೀಕರಣ ಮತ್ತೆ ಆರಂಭಗೊಂಡಿದ್ದು ಜೂನ್ 1 ರಿಂದ ಹೊಸ ಸಂಚಿಕೆಗಳ ಪ್ರಸಾರ ಕೂಡಾ ಆರಂಭವಾಗಿದೆ. ಈ ಸಂತಸದ ನಡುವೆ ಉದಯ ವಾಹಿನಿಯ ನಾಲ್ಕು ಧಾರಾವಾಹಿಗಳು ಮುಕ್ತಾಯಗೊಂಡಿದ್ದರೆ, ಕಲರ್ಸ್ ಸೂಪರ್ನ ಎಲ್ಲಾ ಧಾರಾವಾಹಿಗಳು ಮತ್ತು ಸ್ಟಾರ್ ಸುವರ್ಣ ವಾಹಿನಿಯ ನಾಲ್ಕು ಧಾರಾವಾಹಿಗಳು ಸದ್ದಿಲ್ಲದೇ ಪ್ರಸಾರ ನಿಲ್ಲಿಸಿವೆ.
ಇದರ ಜೊತೆಗೆ ಮಹಾಭಾರತ, ರಾಧಾಕೃಷ್ಣ, ಅಲ್ಲಾವುದ್ದೀನ್, ಗಣೇಶ ಎಂಬ ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಸದ್ಯದಲ್ಲೇ ರಾಮಾಯಣ ಕೂಡ ಪ್ರಸಾರ ಆರಂಭಿಸಲಿದೆ. ಇದರ ಬೆನ್ನಲ್ಲೇ ಡಬ್ಬಿಂಗ್ ವಿರುದ್ಧ ಸ್ವರ ಕೇಳಿ ಬರುತ್ತಿವೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಳೆದ ಡಿಸೆಂಬರ್ನಲ್ಲಿ ಆರಂಭಗೊಂಡಿರುವ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯು ಕೂಡಾ ಸ್ಥಗಿತಗೊಂಡಿದ್ದು, ಆ ಧಾರಾವಾಹಿಯಲ್ಲಿ ಅಜಯ್ ವಿಜಯ್ ಆಗಿ ನಟಿಸುತ್ತಿದ್ದ ತೇಜಸ್ ಗೌಡ "ಡಬ್ಬಿಂಗ್ ಧಾರಾವಾಹಿಯನ್ನು ಪ್ರಸಾರ ಮಾಡುವುದಕ್ಕಾಗಿಯೇ ಕನ್ನಡ ಧಾರಾವಾಹಿ ಪ್ರಸಾರವಾಗುವುದನ್ನು ನಿಲ್ಲಿಸಬೇಕಾಗಿದೆ" ಎಂದು ತಮಗಾದ ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಲಾಕ್ ಡೌನ್ನಿಂದಾಗಿ ಎರಡು ತಿಂಗಳುಗಳ ಕಾಲ ಯಾವುದೇ ಶೂಟಿಂಗ್ ಇರಲಿಲ್ಲ. ಲಾಕ್ ಡೌನ್ ನಂತರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಮಾಡಬಹುದು ಎಂದು ಸರ್ಕಾರ ಹೇಳಿದಾಗ ತುಂಬಾ ಸಂತಸವಾಗಿದ್ದು ನಿಜ. ಇನ್ನೇನು ಆರಂಭವಾಗಲಿರುವ ಶೂಟಿಂಗ್ಗೆ ನಾನು ಸೇರಿದಂತೆ ಉಳಿದ ಕಲಾವಿದರುಗಳು ತಯಾರಾಗಿದ್ದೆವು. ಆಗ ವಾಹಿನಿಯ ಎಲ್ಲಾ ಧಾರಾವಾಹಿಗಳನ್ನು ನಿಲ್ಲಿಸಲಾಗಿದೆ ಎಂಬ ಮಾತು ಕೇಳಿ ಬಂದಿತು.
ಡಬ್ಬಿಂಗ್ ಧಾರಾವಾಹಿಯಿಂದಾಗಿ ಕನ್ನಡ ಕಿರುತೆರೆಯನ್ನೇ ನಂಬಿಕೊಂಡಿರುವ ಕಲಾವಿದರುಗಳ ಜೊತೆಗೆ ತಂತ್ರಜ್ಞರು ಕೂಡಾ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ವಾಹಿನಿಯವರು ಅರಿತುಕೊಳ್ಳಬೇಕು ಎಂದು ಬೇಸರವನ್ನು ವ್ಯಕ್ತಪಡಿಸಿರುವ ತೇಜಸ್ ಗೌಡ ಕನ್ನಡ ಕಿರುತೆರೆಯಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದ್ದಾರೆ.