ದಕ್ಷಿಣ ಭಾರತದ ಸುಪ್ರಸಿದ್ಧ ತಮಿಳು ನಟ ಇಳಯ ದಳಪತಿ ವಿಜಯ್ ಅಭಿನಯದ ನೂತನ ಚಿತ್ರದ ಚಿತ್ರೀಕರಣ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ನಡೆಯಲಿದೆ. ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿ ಚಿತ್ರದ ಶೊಟಿಂಗ್ ನಡೆಯಲಿದೆ. ಡಿಸೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.
ಈಗಾಗಲೇ ಹಳೇ ಜೈಲಿನಲ್ಲಿ ಸಂಪೂರ್ಣವಾಗಿ ಸೆಟ್ ಹಾಕಿ ಬದಲಾಯಿಸಲಾಗಿದೆ. ಜೈಲು ಆವರಣದ ಮುಂಭಾಗ ಕಾಂಪೌಂಡ್ ಸೆಟ್ ಹಾಕಲಾಗಿದೆ. ಇನ್ನು ಜೈಲಿನ ಮುಂಭಾಗ ಕಲ್ಲಿನ ಪುರಾತನ ಕಟ್ಟಡದಂತೆ ಸೆಟ್ ಹಾಕಿ, ಇದು ಜೈಲೇ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ಅದ್ಭುತ ಸೆಟ್ ಹಾಕಲಾಗಿದೆ.
ಇನ್ನೂ ಮುಗಿಯದ ಸೆಟ್ ಕಾರ್ಯ:20 ದಿನಗಳಿಂದ ಚಿತ್ರದ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಸೆಟ್ ನಿರ್ಮಾಣಕ್ಕೆ ತಮಿಳುನಾಡಿನಿಂದ ಕೆಲಸಗಾರರನ್ನು ಕರೆಸಲಾಗಿದೆ. ಹಳೇ ಜೈಲು ಮಾತ್ರವಲ್ಲದೆ ಜೈಲಿನ ಪಕ್ಕದ ಜಾಗದಲ್ಲೂ ಸಹ ಸೆಟ್ ಹಾಕಲಾಗುತ್ತಿದೆ. ಇನ್ನು ಸೆಟ್ ನಿರ್ಮಾಣ ಕಾರ್ಯ ಮುಕ್ತಾಯವಾಗಲು ಕನಿಷ್ಠ 15 ದಿನಗಳು ಬೇಕು ಎಂದು ಪ್ರೊಡಕ್ಷನ್ ಮ್ಯಾನೇಜರ್ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಸೆಟ್ ಹಾಕುವ ಜಾಗಕ್ಕೆ ಯಾರನ್ನು ಒಳಗೆ ಬಿಡುತ್ತಿಲ್ಲ. ಸೆಟ್ ಎಲ್ಲಾರು ನೋಡಿದ್ರೆ ಚಿತ್ರದ ಬಗ್ಗೆ ಕುತೂಹಲವೇ ಇರುವುದಿಲ್ಲ ಎಂಬ ಕಾರಣಕ್ಕೆ ಯಾರನ್ನು ಒಳಗೆ ಬಿಡುತ್ತಿಲ್ಲ.
ಅಂದಹಾಗೆ ವಿಜಯ್ ಚಿತ್ರಕ್ಕೆ ಇನ್ನೂ ಹೆಸರು ಫೈನಲ್ ಆಗಿಲ್ಲ. ಸದ್ಯಕ್ಕೆ ದಳಪತಿ-64 ಎಂಬ ಹೆಸರಿನಿಂದ ಶೂಟಿಂಗ್ ಪ್ರಾರಂಭವಾಗಲಿದೆ. ಇಳಯ ದಳಪತಿ ವಿಜಯ್ ಜೊತೆ ವಿಜಯ್ ಸೇತುಪತಿ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಚನ್ನೈನ ಸವೆನ್ ಸ್ಕ್ರೀನ್ ಸ್ಟೋಡಿಯ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಚಿತ್ರದ ಬಜೆಟ್ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಸೆಟ್ ಹಾಕುವವರು ಹೇಳುವ ಪ್ರಕಾರ, ಈ ಸೆಟ್ನಲ್ಲಿ ಯಾರು ಬಂದು ನಟನೆ ಮಾಡುವರು ಎಂದು ನಮಗೆ ತಿಳಿದಿಲ್ಲ. ಇನ್ನೂ ಅವರು ಶೂಟಿಂಗ್ಗೆ ಯಾವಾಗ ಬರುತ್ತಾರೆ ಅಂತ ನಮಗೆ ತಿಳಿದಿಲ್ಲ. ಮಲೆನಾಡಿನಲ್ಲೂ ವಿಜಯ್ ರವರ ಅಭಿಮಾನಿಗಳು ಸಾಕಷ್ಟು ಇದ್ದು, ತಮ್ಮ ನೆಚ್ಚಿನ ನಟನನ್ನು ನೇರವಾಗಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.