ತಮಿಳಿನ ಖ್ಯಾತ ಹಾಸ್ಯ ನಟ ಹಾಗೂ ಸಮಾಜ ಸೇವಕ ವಿವೇಕ್ ಇಂದು ಮುಂಜಾನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಪದ್ಮಶ್ರೀ ಗೌರವ ಪಡೆದಿರುವ ಖ್ಯಾತ ನಟನ ಅಗಲಿಕೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಅಲ್ಲದೇ ಕನ್ನಡ ಚಿತ್ರರಂಗದ ಸಾಕಷ್ಟು ತಾರೆಯರು ಕಂಬನಿ ಮಿಡಿದಿದ್ದಾರೆ.
ನಟ ನಟ ಪುನೀತ್ ರಾಜ್‌ಕುಮಾರ್, ನಟ ವಿವೇಕ್ ಅಗಲಿಕೆಗೆ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. 'ನಟ ವಿವೇಕ್ ನಿಧನ ಸಿನಿಮಾ ಕುಟುಂಬಕ್ಕೆ ದೊಡ್ಡ ನಷ್ಟ. ಅಪಾರ ಗೌರವ, ಪ್ರೀತಿ ಪಡೆದ ನಮ್ಮ ಕಾಲದ ದೊಡ್ಡ ಹಾಸ್ಯನಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪುನೀತ್ ರಾಜ್‌ಕುಮಾರ್ ಸಂತಾಪ ಸೂಚಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರೂ ಸಹ ವಿವೇಕ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ನಿಮ್ಮ ಅಗಲಿಕೆ ಬಹಳ ದುಃಖ ತಂದಿದೆ. ನಿಮ್ಮ ಕೆಲಸದ ದೊಡ್ಡ ಅಭಿಮಾನಿ ನಾನು ಅಂತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.
ನಿನ್ನೆ ತಾನೇ ಒಬ್ಬ ಮಹಾನ್ ಹಾಸ್ಯ ಕಲಾವಿದನ ಹುಟ್ಟುಹಬ್ಬವನ್ನು ನೆನಪಿಸಿಕೊಂಡೆ. ದುರದೃಷ್ಟವಶಾತ್ ಇಂದು ಒಬ್ಬ ಅಪ್ರತಿಮ ಹಾಸ್ಯ ಕಲಾವಿದ ವಿವೇಕ್ ಸರ್ ಅವರನ್ನು ಭಾರತ ಚಿತ್ರರಂಗ ಕಳೆದುಕೊಂಡಿದೆ ಅಂತಾ ನಟ ಶರಣ್ ಸಂತಾಪ ಸೂಚಿಸಿದ್ದಾರೆ.
ಹಾಗೇ ಆ ಅದ್ಭುತ ಕಲೆಗಾರನಿಂದ ಸ್ಫೂರ್ತಿ ಪಡೆದು ನಾನು ಕಲ್ತಿರೋದು ಸಾಕಷ್ಟಿದೆ. ಹಾಸ್ಯ ಎಂಬ ಶೈಲಿಗೆ ಅವರದ್ದೇ ಆದ ಒಂದು ವಿಭಿನ್ನ ಕೊಡುಗೆ ನೀಡಿರುವ ವಿವೇಕ್ ಸರ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಶರಣ್ ಪ್ರಾರ್ಥಿಸಿದ್ದಾರೆ.
ಇನ್ನು ನಿರ್ದೇಶಕಿ ರೂಪಾ ಐಯ್ಯರ್ ನಿರ್ದೇಶನದ ಹಾಗೂ ಪ್ರೇಮ್ ಅಭಿನಯದ ಚಂದ್ರ ಸಿನಿಮಾದಲ್ಲಿ ನಟ ವಿವೇಕ್ ಅಭಿನಯಿಸುವ ಮೂಲಕ ಕನ್ನಡ ಚಿತ್ರದಲ್ಲಿ ನಟಿಸಿದರು. ಈ ಸಿನಿಮಾದ ನಾಯಕ ಪ್ರೇಮ್ ಕೂಡ ವಿವೇಕ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೇ ನಟ ನೀನಾಸಂ ಸತೀಶ್ ಕೂಡ ಅದ್ಭುತ ಕಲಾವಿದನನ್ನ ಕಳೆದುಕೊಂಡಿದ್ದೇವೆ ಅಂತಾ ಸಂತಾಪ ಸೂಚಿಸಿದ್ದಾರೆ.
ಇನ್ನು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ತಮಿಳು ನಟ ವಿವೇಕ್ ನಿಧನದ ಬಗ್ಗೆ ಕಂಬನಿ ಮಿಡಿದಿದ್ದು, ಇದೊಂದು ಶಾಕಿಂಗ್ ನ್ಯೂಸ್ ಅಂತಾ ಹೇಳಿದ್ದಾರೆ. ಹೀಗೆ ಕನ್ನಡದ ಸಾಕಷ್ಟು ಸೆಲೆಬ್ರಿಟಿಗಳು ವಿವೇಕ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.