ಇಡೀ ಭಾರತೀಯ ಚಿತ್ರರಂಗದ ದೃಷ್ಟಿ ತಮಿಳು ನಟ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರದ ಮೇಲಿತ್ತು. ಆ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ, ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಚಿತ್ರದ ಕಲೆಕ್ಷನ್ ಎಷ್ಟಾಗಬಹುದು ಎಂಬ ಕುತೂಹಲ ಮತ್ತು ನಿರೀಕ್ಷೆ ಎಲ್ಲರಿಗೂ ಇತ್ತು. ಆ ನಿರೀಕ್ಷೆಗೆ 'ಮಾಸ್ಟರ್' ಮೋಸ ಮಾಡಿಲ್ಲ. ಚಿತ್ರವು ಕೇವಲ ಮೂರು ದಿನಗಳಲ್ಲಿ ನೂರು ಕೋಟಿ ಸಂಪಾದಿಸಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ 50 ಕೋಟಿ ತಮಿಳುನಾಡಿನಿಂದಲೇ ಬಂದಿದೆಯಂತೆ.
ಒಂದು ಕಡೆ ಕೊರೊನಾ ಭಯ. ಇನ್ನೊಂದು ಕಡೆ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಮಾತ್ರ. ಹೀಗಿದ್ದರೂ ಚಿತ್ರವು ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದು ಸಾಮಾನ್ಯ ವಿಷಯವೇನಲ್ಲ. ಜನ ಇನ್ನು ಚಿತ್ರಮಂದಿರಕ್ಕೆ ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಮಾಸ್ಟರ್ ಚಿತ್ರಕ್ಕೆ ಇಂಥದ್ದೊಂದು ಪ್ರತಿಕ್ರಿಯೆ ಸಿಗುತ್ತಿರುವುದು ಬರೀ ತಮಿಳು ಚಿತ್ರರಂಗವಷ್ಟೇ ಅಲ್ಲ, ಬೇರೆ ಭಾಷೆಗಳ ಚಿತ್ರರಂಗಗಳಿಗೂ ಹೊಸ ಜೋಶ್ ನೀಡಿದೆ. ಮಾಸ್ಟರ್ ಚಿತ್ರಕ್ಕೆ ಬಂದ ಹಾಗೆ ತಮ್ಮ ಚಿತ್ರಗಳಿಗೂ ಜನ ಬಂದು ಗೆಲ್ಲಿಸಬಹುದು ಎಂಬ ನಿರ್ಮಾಪಕರ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ಸರಿಯಾಗಿ ಫೆಬ್ರವರಿಯಿಂದ ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ನಿರೀಕ್ಷೆಗಳಿವೆ.