ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ಹಿನ್ನೆಲೆ ಇಂದು ಪುನೀತ್ ಮನೆಗೆ ಭೇಟಿ ನೀಡಿದ ತಮಿಳು ನಟ ಪ್ರಭು ಗಣೇಶನ್ ಅಪ್ಪು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬೆಂಗಳೂರಿನ ಸದಾಶಿವ ನಗರದ ಮನೆಗೆ ಭೇಟಿ ನೀಡಿದ ತಮಿಳು ನಟ ಪ್ರಭು ಅವರು, ಪುನೀತ್ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು, ನಮ್ಮ ತಂದೆ ಶಿವಾಜಿ ಗಣೇಶನ್ ಹಾಗೂ ವರನಟ ರಾಜಕುಮಾರ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು.
ಅದೇ ರೀತಿ ನಾವು ಶಿವಣ್ಣ, ಪುನೀತ್, ರಾಘು ಎಲ್ಲರೂ ಕುಟುಂಬಕ್ಕಿಂತ ಹೆಚ್ಚು ಆಪ್ತರಾಗಿದ್ದೆವು. ಅಪ್ಪು ನಮ್ಮನ್ನ ಬಿಟ್ಟು ಹೋಗಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದರು. ನಾನು ಅನಾರೋಗ್ಯಕ್ಕೀಡಾದಾಗ ಅಪ್ಪು 6 ಗಂಟೆಗಿಂತ ಹೆಚ್ಚು ಸಮಯ ನನ್ನ ಜತೆ ಕುಳಿತಿದ್ದರು. ಅದನ್ನ ನಾನು ಯಾವತ್ತೂ ಮರೆಯಲ್ಲ.