ಹೈದರಾಬಾದ್: ಅಮೆರಿಕನ್ ಲೂನಾರ್ ಸೊಸೈಟಿ ನಟ ದಿ. ಸುಶಾಂತ್ ಸಿಂಗ್ ರಜಪೂತ್ ಅವರ ಮುಂದಿನ ಹುಟ್ಟುಹಬ್ಬವನ್ನು 'ಸುಶಾಂತ್ ಮೂನ್' ಎಂದು ಆಚರಿಸಲು ನಿರ್ಧರಿಸಿದ್ದು, ಸುಶಾಂತ್ ನಿಧನದಿಂದ ಇನ್ನೂ ಹೊರ ಬರದಿರುವ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ.
ಸುಶಾಂತ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಗ್ಯಾಲಕ್ಸಿ ಹಾಗೂ ಬಾಹ್ಯಾಕಾಶ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದರು. ಸುಶಾಂತ್ ಅವರ ಬಾಹ್ಯಾಕಾಶ ಪ್ರೀತಿಯನ್ನು ಗಮನಸಿದ್ದ ಅಮೆರಿಕನ್ ಲೂನಾರ್ ಸೊಸೈಟಿ ಜನವರಿ 21, 2023ರಂದು ಸುಶಾಂತ್ ಜನ್ಮದಿನವನ್ನು ಸುಶಾಂತ್ ಮೂನ್ ದಿನವಾಗಿ ಆಚರಿಸಲಾಗುವುದು ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಘೋಷಿಸಿದೆ.
'ಸುಶಾಂತ್ ಮೂನ್' ಕಾರ್ಯಕ್ರಮ ಒಂದು ಬಾರಿಗೆ ಸೀಮಿತವಾಗಿರದೆ ಇದೊಂದು ಐತಿಹಾಸಿಕ ಹಾಗೂ ವಾರ್ಷಿಕ ಈವೆಂಟ್ ಆಗಿರಲಿದೆ. ಪ್ರತಿ ಬಾರಿ ಅಮಾವಾಸ್ಯೆಯ ರಾತ್ರಿಯೇ ಸುಶಾಂತ್ ಹುಟ್ಟುಹಬ್ಬ ಆಚರಿಸಬೇಕೆಂದಿಲ್ಲ. ಟ್ವಿಟರ್ ಅಂಕಿ-ಅಂಶಗಳ ಪ್ರಕಾರ #SushantDay ಟ್ರೆಂಡಿಂಗ್ನಲ್ಲಿ ಸುಶಾಂತ್ಗಾಗಿ ಅಭಿಮಾನಿಗಳು 5.3 ಮಿಲಿಯನ್ ಟ್ವೀಟ್ಗಳನ್ನು ಮಾಡಿದ್ದಾರೆ.
'ಚಂದ ಮಾಮ ದೂರ್ ಕೆ' ಸಿನಿಮಾಕ್ಕೆ ನಟ ಸುಶಾಂತ್ ಸಹಿ ಹಾಕಿದ್ದರು. ಈ ಚಿತ್ರದಲ್ಲಿ ಸುಶಾಂತ್ ಗಗನಯಾತ್ರಿಯಾಗಿ ಅಭಿನಯಿಸಬೇಕಿತ್ತು. ಆ ಸಿನಿಮಾಕ್ಕಾಗಿ ಸುಶಾಂತ್ ಅಮೆರಿಕಕ್ಕೂ ಹೋಗಿದ್ದರು. ಆದರೆ ಅದು ಈಡೇರುವ ಮೊದಲೇ ಸುಶಾಂತ್ ಇಹಲೋಕ ತ್ಯಜಿಸಿದರು.
2020 ಜೂನ್ 14ರಂದು ನಟ ಸುಶಾಂತ್ ತಮ್ಮ ಮುಂಬೈನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರನ್ನು ಕಳೆದುಕೊಂಡ ಅಬಿಮಾನಿ ಬಳಗ ಇಂದಿಗೂ ಆ ದುಃಖದಿಂದ ಹೊರಬಂದಿಲ್ಲ. ಅವರ ಸಾವಿನ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ.