ವಿಭಿನ್ನ ರೀತಿಯ ಧಾರಾವಾಹಿಗಳು, ನಾನಾ ನಮೂನೆಯ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರ ಮನ ಗೆದ್ದಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ಕೂಡ ಒಂದು. ಮಹಾಭಾರತ, ರಾಧಾ ಕೃಷ್ಣ ಎಂಬ ಪೌರಾಣಿಕ ಡಬ್ಬಿಂಗ್ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿರುವ ಸ್ಟಾರ್ ಸುವರ್ಣ ಇದೀಗ ಹೊಸ ಕಾರ್ಯಕ್ರಮದ ಮೂಲಕ ನಿಮ್ಮ ಮುಂದೆ ಬರುತ್ತಿದೆ.
ಮಹಿಳೆಯರಿಗಾಗಿಯೇ ಬರಲಿದೆ ಹೊಸ ಕಾರ್ಯಕ್ರಮ 'ಸೂಪರ್ ಸ್ಟಾರ್' - Super Star program on Star suvarna
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ಆರಂಭವಾಗಲಿದ್ದು, ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ಮೀಸಲಾಗಿದೆ.
ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೂಪರ್ ಸ್ಟಾರ್ ಎಂಬ ಕಾರ್ಯಕ್ರಮ ಆರಂಭವಾಗಲಿದ್ದು, ಇದು ಕೇವಲ ಹೆಣ್ಮಕ್ಕಳಿಗೆ ಮಾತ್ರ ಮೀಸಲು. ಕರುನಾಡಿನ ಹೆಣ್ಣು ಮಕ್ಕಳಿಗೆ ಸೂಪರ್ ಸ್ಟಾರ್ ಆಗಲು ಸ್ಟಾರ್ ಸುವರ್ಣ ವಾಹಿನಿಯು ಸುವರ್ಣ ವೇದಿಕೆ ಕಲ್ಪಿಸಿದೆ. ಈ ವೇದಿಕೆ ಮೇಲೆ ಬರುವವರು ಕೇವಲ ಆಟ ಮಾತ್ರವಲ್ಲದೆ ಸೂಪರ್ ಸ್ಟಾರ್ಗಳಾಗಿ ಕನ್ನಡಿಗರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಲಿದ್ದಾರೆ. ಪಾಪಾ ಪಾಂಡು ಪಾಚು ಎಂದೇ ಜನಪ್ರಿಯವಾಗಿರುವ ಶಾಲಿನಿ ಅವರ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಕಾರ್ಯಕ್ರಮದ ಗ್ರಾಂಡ್ ಒಪನಿಂಗ್ ಇದೇ ನವೆಂಬರ್ 23ರಂದು ನಡೆಯಲಿದೆ. ಇದರ ಪ್ರೋಮೋ ಈಗಾಗಲೇ ಹರಿದಾಡುತ್ತಿದ್ದು, ವಿನೂತನ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಹೆಣ್ಣುಮಕ್ಕಳಿಗೆ ಸ್ಫೂರ್ತಿ ನೀಡಲು ಕನ್ನಡದ ತಾರೆಯರು ಬರುತ್ತಿದ್ದಾರೆ. ಚಂದನವನದ ಚೆಂದದ ತಾರೆಯರಾದ ಸುಧಾರಾಣಿ, ಅನುಪ್ರಭಾಕರ್, ಐಂದ್ರಿತಾ ರೇ ಜೊತೆಗೆ ಆರ್ಜೆ ರಶ್ಮಿ , ನಿರೂಪಕಿ ಚೈತ್ರಾ ವಾಸುದೇವನ್ ಮತ್ತು ಸುಷ್ಮಾರಾವ್ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಇನ್ನು ಮುಂದೆ ವೀಕ್ಷಕರಿಗೆ ಮನರಂಜನೆ ಸಿಗುವುದಂತೂ ಪಕ್ಕಾ. ಅಂದಹಾಗೆ ನವೆಂಬರ್ 23ರಿಂದ ಸಂಜೆ 5 ಗಂಟೆಗೆ ಸುವರ್ಣ ಸೂಪರ್ ಸ್ಟಾರ್ ಆರಂಭವಾಗಲಿದೆ.