ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯದ 'ಸೂಪರ್ಸ್ಟಾರ್' ಸಿನಿಮಾ ಘೋಷಣೆಯಾಗಿ ನಾಲ್ಕು ತಿಂಗಳಾಗಿವೆ. ಚಿತ್ರದ ಮುಹೂರ್ತ ಆಗಿ ಎರಡು ತಿಂಗಳಾಗಿವೆ. ಆದರೆ, ಚಿತ್ರದ ನಾಯಕಿಯ ಆಯ್ಕೆ ಮಾತ್ರ ಇನ್ನೂ ಆಗಿರಲಿಲ್ಲ. ಇದೀಗ ನಾಯಕಿಯ ಆಯ್ಕೆ ಆಗಿದ್ದು, ಝಾರಾ ಯಾಸ್ಮಿನ್ ಎಂಬ ಬೆಡಗಿ ಮುಂಬೈನಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಝಾರಾ ಯಾಸ್ಮಿನ್ ಮುಂಬೈ ಮೂಲದವರಾಗಿದ್ರೂ ಈವರೆಗೂ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಹಾಗಾಗಿ ಬಾಲಿವುಡ್ ನಟಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಝಾರಾ ಈವರೆಗೂ ಮಾಡಲಿಂಗ್‍ನಲ್ಲಿ ಗುರುತಿಸಿಕೊಂಡಿದ್ದರು. ಒಂದಿಷ್ಟು ವಿಡಿಯೋ ಸಾಂಗ್‍ಗಳಲ್ಲಿ ಕಾಣಿಸಿದ್ದರು. ಬಾಲಿವುಡ್‍ನ ಯಾವುದಾದ್ರೂ ಚಿತ್ರದಲ್ಲಿ ನಟಿಸಬೇಕು ಎನ್ನುವಷ್ಟರಲ್ಲೇ ಅವರಿಗೆ ಕನ್ನಡದಲ್ಲಿ 'ಸೂಪರ್ಸ್ಟಾರ್' ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿದೆ. ಜನವರಿ ಮೂರನೇ ವಾರದಿಂದ ಝಾರಾ ಅವರು 'ಸೂಪರ್ಸ್ಟಾರ್' ಚಿತ್ರತಂಡ ಸೇರಲಿದ್ದಾರೆ.