ಸೂಪರ್ ಸ್ಟಾರ್ ರಜಿನಿಕಾಂತ್‌ಗೆ 71ನೇ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಲೈವಾಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಮರಾಠಿ ಕುಟುಂಬಕ್ಕೆ ಸೇರಿದ ರಜಿನಿಕಾಂತ್, 12 ಡಿಸೆಂಬರ್1950 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ಶಿವಾಜಿರಾವ್ ಗಾಯಕ್ವಾಡ್. ಬೆಂಗಳೂರಿನ ಹನುಮಂತನಗರದಲ್ಲಿ ನೆಲೆಸಿದ್ದ ರಜಿನಿ ಕಾಲೇಜು ಶಿಕ್ಷಣ ಮುಗಿಸಿ ಕಂಡಕ್ಟರ್ ವೃತ್ತಿಗೆ ಸೇರಿದರು. ಆದರೆ ಚಿಕ್ಕಂದಿನಿಂದ ಅವರಿಗಿದ್ದ ಸಿನಿಮಾ ಸೆಳೆತದಿಂದ ರಜಿನಿ ಮದ್ರಾಸ್ಗೆ ತೆರಳಿ ಅಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದರು.
1973ರಲ್ಲಿ ಮದ್ರಾಸ್ ಚಲನಚಿತ್ರ ಸಂಸ್ಥೆಯನ್ನು ಸೇರಿಕೊಂಡರು. ತಮಿಳಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ರಜಿನಿಕಾಂತ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 1975 ರಲ್ಲಿ ಬಿಡುಗಡೆಯಾದ 'ಅಪೂರ್ವ ರಾಗಂಗಳ್' ಚಿತ್ರದ ಮೂಲಕ ನಟನೆ ಪ್ರಾರಂಭಿಸಿದ ರಜಿನಿಕಾಂತ್ ಈಗ 'ಕಬಾಲಿ' ಆಗಿ ಅಭಿಮಾನಿಗಳ ಹೃದಯದಲ್ಲಿ ರಾರಾಜಿಸುತ್ತಿದ್ದಾರೆ.