'ಅಮ್ಮನ ಮನೆ' ಸಿನಿಮಾ ಬಳಿಕ ರಾಘವೇಂದ್ರ ರಾಜ್ ಕುಮಾರ್ ಒಂದರ ಹಿಂದೆ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ರಾಘವೇಂದ್ರ ರಾಜ್ ಕುಮಾರ್ 'ಬೆಳಕು' ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ನಟಿ ಸುಧಾರಾಣಿ ಮೊದಲ ಬಾರಿಗೆ ರಾಘಣ್ಣನ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.ಇದು ನೇತ್ರದಾನದ ಕುರಿತಾದ ಸಿನಿಮಾ ಆಗಿದ್ದು ರಾಘವೇಂದ್ರ ರಾಜ್ ಕುಮಾರ್ ಮತ್ತು ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇತ್ತೀಚೆಗೆ 'ಬೆಳಕು' ಸಿನಿಮಾದ ಮುಹೂರ್ತ ನೆರವೇರಿದ್ದು ಸಿನಿಮಾ ಚಿತ್ರೀಕರಣ, ಬೆಂಗಳೂರಿನ ಮನೆಯೊಂದರಲ್ಲಿ ನಡೆಯುತ್ತಿದೆ. ಇದಕ್ಕೂ ಮುನ್ನ 'ಹೂವು ಬಳ್ಳಿ' ಸಿನಿಮಾವನ್ನು ನಿರ್ದೇಶಿಸಿದ್ದ ನಿರ್ದೇಶಕ ಮಂಜುನಾಥ್ ರಾಘವೇಂದ್ರ ರಾಜ್ ಕುಮಾರ್ ಹಾಗೂ ಸುಧಾರಾಣಿ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡರು. ತಮ್ಮ ಪಾತ್ರದ ಬಗ್ಗೆ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, 'ಬೆಳಕು' ಎಂದ ಕೂಡಲೇ ನಮಗೆ ಕಣ್ಣು ನೆನಪಾಗುತ್ತದೆ. ಇದು ನಾಯಕ-ನಾಯಕಿ ಪ್ರಧಾನ ಸಿನಿಮಾ ಅಲ್ಲ. ಇದು ನೇತ್ರದಾನದ ಬಗ್ಗೆ ಸಂದೇಶ ನೀಡುವ ಸಿನಿಮಾ. ಅಪ್ಪಾಜಿ ನೇತ್ರದಾನ ಮಾಡಿ ಹೋಗಿದ್ದಾರೆ. ಅಂಥ ಒಂದು ಸಂದೇಶ ಇರುವ ಸಿನಿಮಾ ಈಗ ನನ್ನ ಪಾಲಿಗೆ ಬಂದಿದೆ ಎಂದರು. ಸುಧಾರಾಣಿ ಮಾತನಾಡಿ, ಡಾ. ರಾಜ್ಕುಮಾರ್ ಕುಟುಂಬದ ಎಲ್ಲರೊಂದಿಗೆ ಅಭಿನಯಿಸಿದ ಖುಷಿ ನನಗೆ ಸಿಕ್ಕಿದೆ ಅಂದರು. ನಿರ್ದೇಶಕ ಮಂಜುನಾಥ್, ಅನೇಕ ವರ್ಷಗಳಿಂದ ಡಾ. ರಾಜ್ಕುಮಾರ್ ಅವರ ಬ್ಯಾನರ್ನಲ್ಲಿ ಕೆಲಸ ಮಾಡಿದ್ದಾರಂತೆ.