ಸಲ್ಮಾನ್ ಖಾನ್ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿರುವ 'ದಬಾಂಗ್ 3' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸಿದ್ದು ಗೊತ್ತೇ ಇದೆ. ಈ ಚಿತ್ರದಲ್ಲಿ ಸುದೀಪ್ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಸೂಪರ್ ಸ್ಟಾರ್ ಆಗಿರುವಾಗ, ಸಲ್ಮಾನ್ ಎದುರು ವಿಲನ್ ಆಗಿ ನಟಿಸುವುದರ ಜೊತೆಗೆ ಅವರಿಂದ ಹೊಡೆತ ತಿನ್ನುವ ಅವಶ್ಯಕತೆ ಏನಿತ್ತು ಎಂದು ಹಲವರು ಸುದೀಪ್ ನಟನೆಯ ಬಗ್ಗೆ ಮಾತಾಡಿಕೊಂಡಿದ್ದರು. ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದಿದೆ. ಎಲ್ಲರೂ ಚಿತ್ರವನ್ನು ಮರೆತುಬಿಟ್ಟಿದ್ದಾರೆ.
ಆದರೆ, ದಬಾಂಗ್ 3 ಚಿತ್ರಕ್ಕೆ ಸುದೀಪ್ ಪಡೆದ ಸಂಭಾವಣೆ ಎಷ್ಟು ಎಂಬ ಪ್ರಶ್ನೆ ಕೆಲವರಲ್ಲಿ ಖಂಡಿತವಾಗಿಯೂ ಇರುತ್ತದೆ. ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಸುದೀಪ್ ಕೋಟ್ಯಂತರ ರೂ. ಸಂಭಾವನೆ ಪಡೆದಿರಬಹುದು ಎಂದು ನೀವು ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು. ಯಾಕೆಂದರೆ ದಬಾಂಗ್ 3 ಚಿತ್ರದ ನಟನೆಗೆ ಒಂದು ರೂಪಾಯಿಯನ್ನೂ ಕೂಡ ಸುದೀಪ್ ಪಡೆದುಕೊಂಡಿಲ್ಲವಂತೆ. ಈ ಬಗ್ಗೆ ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ.