ವರಮಹಾಲಕ್ಷ್ಮೀ ಹಬ್ಬಕ್ಕೆ ಸುದೀಪ್ ಅವರ 'ಪೈಲ್ವಾನ್' ಹಾಗೂ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾಗಳು ತೆರೆಯ ಮೇಲೆ ಮುಖಾಮುಖಿಯಾಗಲಿವೆ ಅಂತಾ ಹೇಳಲಾಗಿತ್ತು. ಆದರೆ, ಇದೀಗ ಈ ಎರಡು ಚಿತ್ರಗಳು ದೊಡ್ಡ ಅಂತರದಲ್ಲಿಯೇ ರಿಲೀಸ್ ಆಗುತ್ತಿವೆ. ಸದ್ಯ ಹೊಸ ವಿಷಯ ಏನಂದ್ರೆ ಕುರುಕ್ಷೇತ್ರ ಚಿತ್ರ ಬಿಡುಗಡೆ ದಿನವೇ ಪೈಲ್ವಾನ್ ಹವಾ ಸೃಷ್ಟಿಸೋಕೆ ಬರ್ತಿದ್ದಾನೆ.
ಕುರುಕ್ಷೇತ್ರ ರಿಲೀಸ್ ದಿನದಂದೇ ಕೋಟೆ ನಾಡಿನಲ್ಲಿ ಪೈಲ್ವಾನ್ ಗಾನಾಬಜಾನಾ - ವರಮಹಾಲಕ್ಷ್ಮೀ ಹಬ್ಬ
ಆಗಸ್ಟ್ 9 ವರಮಹಾಲಕ್ಷ್ಮೀ ಹಬ್ಬದಂದು ಕೋಟೆ ನಗರಿ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್ನ ಧ್ವನಿಸುರಳಿ ಬಿಡುಗಡೆಯಾಗಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಪೌರಾಣಿಕ ಸಿನಿಮಾ ಕುರುಕ್ಷೇತ್ರ ಇದೇ 9ರಂದು ಬಿಡುಗಡೆಯಾಗುತ್ತಿದೆ. ಅಂದೇ ಜಗಜಟ್ಟಿ ಮಲ್ಲನಾಗಿ ಸುದೀಪ್ ಅಭಿನಯಿಸಿರುವ ಪೈಲ್ವಾನ್ ಸಿನಿಮಾ ಆಡಿಯೋ ರಿಲೀಸ್ ಆಗಲಿದೆ. ಅಂದು ಕೋಟೆ ನಗರಿ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ಪೈಲ್ವಾನ್ನ ಗಾನಾಬಜಾನಾ ಅನಾವರಣಗೊಳ್ಳಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನಿಮ್ಮೆಲ್ಲರ ನಿರೀಕ್ಷೆಯ ಪೈಲ್ವಾನ್ ಆಡಿಯೋ ಚಿತ್ರದುರ್ಗದಲ್ಲಿ ಆಗಸ್ಟ್ 9ಕ್ಕೆ ರಿಲೀಸ್ ಆಗ್ತಿದೆ ಎಂದಿದ್ದಾರೆ.
ಇನ್ನು ಪ್ಯಾನ್ ಇಂಡಿಯಾ ಪೈಲ್ವಾನ್ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಹಾಡುಗಳು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿವೆ. ಸೆಪ್ಟೆಂಬರ್ 12ರಂದು ಸಿನಿಮಾ ರಿಲೀಸ್ ಆಗಲಿದೆ.