ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಕೇರಳದಲ್ಲಿ ಪ್ರಾರಂಭವಾಗಿದ್ದು, ಇನ್ನೊಂದು ತಿಂಗಳ ಕಾಲ ಅಲ್ಲೇ ಚಿತ್ರೀಕರಣ ಮುಂದುವರೆಯಲಿದೆ. ಈ ಮಧ್ಯೆ ಚಿತ್ರದಿಂದ ಒಂದು ಸುದ್ದಿ ಬಂದಿದ್ದು ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ 2021ರ ಜನವರಿಯಲ್ಲಿ ದುಬೈನ ಭುರ್ಜ್ ಖಲೀಫಾದಲ್ಲಿ 'ಫ್ಯಾಂಟಮ್' ಟೀಸರ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸುದೀಪ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1997ರಲ್ಲಿ ಬಿಡುಗಡೆಯಾದ 'ತಾಯವ್ವ' ಚಿತ್ರದ ಮೂಲಕ. ಈ ಚಿತ್ರ ಬಿಡುಗಡೆಯಾಗಿ ಮತ್ತು ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು 2022 ಕ್ಕೆ 25 ವರ್ಷಗಳು ತುಂಬಲಿದೆ. ಮುಂದಿನ ವರ್ಷದ ಆರಂಭದಿಂದಲೇ ಈ ಸಿಲ್ವರ್ ಜ್ಯೂಬ್ಲಿ ಸಂಭ್ರಮ ಪ್ರಾರಂಭವಾಗಲಿದ್ದು, ಒಂದು ವರ್ಷಗಳ ಕಾಲ ಈ ಸಂಭ್ರಮ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ. ಅದರ ಮೊದಲ ಹಂತವಾಗಿ 'ಫ್ಯಾಂಟಮ್' ಚಿತ್ರದ ಟೀಸರನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಈ ಟೀಸರ್ ಬಿಡುಗಡೆ ಮೂಲಕ ಸಿಲ್ವರ್ ಜ್ಯೂಬಿಲಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ.