ಕನ್ನಡ ಚಿತ್ರರಂಗ ಅಲ್ಲದೆ ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ತಮ್ಮ ಖದರ್ ತೋರಿಸಿರುವ ನಟ ಕಿಚ್ಚ ಸುದೀಪ್ ಸದ್ಯಕ್ಕೆ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈಗ, ಬಾಹುಬಲಿ ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಸುದೀಪ್ ಇದೀಗ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಸೈ ರಾ ನರಸಿಂಹರೆಡ್ಡಿ' ಚಿತ್ರದಲ್ಲಿ ಕೂಡಾ ನಟಿಸಿದ್ದ ಕಿಚ್ಚ, ಇದೀಗ ಪವನ್ ಕಲ್ಯಾಣ್ ಜೊತೆ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಮಲಯಾಳಂನಲ್ಲಿ ತೆರೆ ಕಂಡು ಸೂಪರ್ ಹಿಟ್ ಆಗಿದ್ದ 'ಅಯ್ಯಪ್ಪನುಮ್ ಕೋಶಿಯುಮ್' ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದೆ. ಬಿಜು ಮೆನನ್, ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾದಲ್ಲಿ ಬಿಜು ಮಾಡಿದ್ದ ಪೊಲೀಸ್ ಅಧಿಕಾರಿ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಮಾಡಲಿದ್ದಾರಂತೆ. ಪೃಥ್ವಿರಾಜ್ ಮಾಡಿದ್ದ ಕೋಶಿ ಪಾತ್ರಕ್ಕೆ ಸುದೀಪ್ ಪಕ್ಕಾ ಆಗಿದೆ ಎನ್ನಲಾಗುತ್ತಿದೆ.