ಕಿಚ್ಚ ಸುದೀಪ್ ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಎಷ್ಟೋ ಜನರಿಗೆ ಅವರು ನೆರವಾಗಿದ್ದಾರೆ. ಈಗ ಬಡ ಮುಸ್ಲಿಂ ಕುಟುಂಬದ ಹುಡುಗಿಯ ಮದುವೆಗೆ ಸುದೀಪ್ ಹಣದ ಸಹಾಯ ಮಾಡಿದ್ದಾರೆ.
ಬಡ ಮುಸ್ಲಿಂ ಕುಟುಂಬದ ಯುವತಿ ಮದುವೆಗೆ ನೆರವು ನೀಡಿದ ಕಿಚ್ಚ ಸುದೀಪ್ - Sudeep social work
ಅನೇಕ ಬಡಕುಟುಂಬಗಳ ನೆರವಿಗೆ ನಿಂತಿರುವ ಸುದೀಪ್ ಚಾರೆಟಬಲ್ ಟ್ರಸ್ಟ್ ಇದೀಗ ಬಡ ಮುಸ್ಲಿಂ ಕುಟುಂಬದ ಹೆಣ್ಣುಮಗಳ ಮದುವೆಗೆ ಹಣದ ಸಹಾಯ ಮಾಡಿದೆ. ಹಣಸಹಾಯ ಪಡೆದ ಕುಟುಂಬ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದೆ.
ಬೆಂಗಳೂರಿನಲ್ಲಿ ಆಟೋ ಓಡಿಸುತ್ತಿದ್ದ ರಿಯಾಜ್ ಎಂಬ ಯುವಕ ಲಾಕ್ಡೌನ್ಗೂ ಮುನ್ನ ತಂಗಿಯ ಮದುವೆ ಫಿಕ್ಸ್ ಮಾಡಿದ್ದರು. ಆದರೆ ಮದುವೆಗೆ ಹಣ ಹೊಂದಿಸಲು ಬಹಳ ಕಷ್ಟಪಡುತ್ತಿದ್ದರು. ದಿಕ್ಕು ತೋಚದೆ ಕೊನೆಗೆ ರಿಯಾಜ್ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೊರೆ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ರಿಯಾಜ್ ತಂಗಿಯ ಮದುವೆ ಖರ್ಚಿಗೆ ಹಣ ನೀಡುವಂತೆ ಟ್ರಸ್ಟ್ ಸದಸ್ಯರಿಗೆ ಸುದೀಪ್ ಸೂಚನೆ ನೀಡಿದ್ದರು. ಸುದೀಪ್ ಸೂಚನೆ ಮೇರೆಗೆ ಟ್ರಸ್ಟ್ ಸದಸ್ಯರು ಇಂದು ರಿಯಾಜ್ ಕುಟುಂಬಕ್ಕೆ ಹಣ ಸಹಾಯ ಮಾಡಿದ್ದಾರೆ.
ಸಹಾಯ ಕೇಳಿದ ಕೇವಲ ಒಂದೇ ದಿನದಲ್ಲಿ ನೆರವಿಗೆ ಬಂದ ಸುದೀಪ್ಗೆ ರಿಯಾಜ್ ಕುಟುಂಬ ಧನ್ಯವಾದ ಹೇಳಿದೆ. ಕಷ್ಟದಲ್ಲಿದ್ದ ವೇಳೆ ಸಹಾಯ ಮಾಡಿದ ಕಿಚ್ಚನ ಹೃದಯ ವೈಶಾಲ್ಯತೆಗೆ ನಸ್ರಿನ್ ಭಾವುಕಳಾಗಿ ಮಾಣಿಕ್ಯನಿಗೆ ಕೈ ಮುಗಿದು ಧನ್ಯವಾದ ಹೇಳಿದ್ದಾರೆ. ಕಳೆದ ವಾರ ಮೈಸೂರಿನ ಬಾಲಕನೊಬ್ಬನ ಚಿಕಿತ್ಸೆಗೆ ಕೂಡಾ ಸುದೀಪ್ ಹಣದ ನೆರವು ನೀಡಿದ್ದರು.