ಶಿವಮೊಗ್ಗ:ಅಭಿಮಾನಿಗಳ ಪಾಲಿಗೆ 'ರನ್ನ' ನಾಗುತ್ತಿರುವ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಸಮಾಜ ಸೇವೆಯ ವಿಷ್ಯದಲ್ಲಿ 'ಮಾಣಿಕ್ಯ'ನೇ ಸರಿ. ಸಿನಿಮಾ ನಟನೆ, ನಿರ್ದೇಶನದ ಜತೆ ಸಮಾಜ ಸೇವೆಯನ್ನೂ ಮಾಡುತ್ತಾ ಬಂದಿರುವ ಸುದೀಪ್ ಅದೆಷ್ಟೋ ಬಡ ಕುಟುಂಬಗಳ ಸು'ದೀಪ' ರಾದವರು ಕೂಡಾ. ಅದರಲ್ಲೂ ಕೊರೊನಾ ಲಾಕ್ ಡೌನ್ ನಂತರ ಇವರು ಎಲೆಮರೆಕಾಯಿ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಇದೀಗ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಕ್ಷರ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಈ ಮೂಲಕ ಕಾಡಿನಲ್ಲಿ ವಾಸಿಸುವ ಮಕ್ಕಳ ಶಿಕ್ಷಣ ಕ್ರಾಂತಿಗೆ ಸಿದ್ಧರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಇರುವ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್.ಹಳ್ಳಿ, ಹಾಗೂ ಎಸ್.ಆರ್.ನಗರದ ಶಾಲೆ ಸೇರಿ ಒಟ್ಟು ನಾಲ್ಕು ಸರ್ಕಾರಿ ಶಾಲೆಗಳನ್ನು ಸುದೀಪ್ ದತ್ತು ಪಡೆದಿದ್ದಾರೆ.
ಈ ನಾಲ್ಕು ಶಾಲೆಗಳಲ್ಲಿ ಆವಿಗೆ ಗ್ರಾಮದ ಸರ್ಕಾರಿ ಶಾಲೆ ವಿಶೇಷವಾಗಿದೆ. ಯಾಕೆಂದರೆ, ಆವಿಗೆ ಹಳ್ಳಿ ಸಾಗರದಿಂದ 49 ಕಿಲೋಮೀಟರ್ ದೂರದಲ್ಲಿದೆ. ಈ ಶಾಲೆ ಇರೋದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರುವ ಗುಡ್ಡಗಾಡಿನ ಕುಣಬಿ ಜನಾಂಗದ ಬುಡಕಟ್ಟು ಮಕ್ಕಳಿಗಾಗಿ ಸರ್ಕಾರ ಶಾಲೆ ಕಟ್ಟಿಸಿ, ಶಾಲೆಗೆ ಮುಖ್ಯೋಪಾಧ್ಯಯರನ್ನು ನೇಮಿಸಿದೆ. ಆದರೆ ಈ ಮಕ್ಕಳಿಗೆ ಪಾಠ ಮಾಡೊಕೇ ಶಿಕ್ಷಕರ ಕೊರತೆ ಇದೆ. ಅಗತ್ಯ ಸೌಕರ್ಯಗಳು ಇಲ್ಲಿಲ್ಲ.