ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಎಲ್ಲರಿಗೂ ಸಕ್ಸಸ್ ದೊರೆಯುವುದು ಕಷ್ಟ. ಒಂದು ಕಾಲದಲ್ಲಿ ಸ್ಟಾರ್ಗಳಾಗಿ ಖ್ಯಾತಿ ಪಡೆದ ನಟ-ನಟಿಯರ ಮಕ್ಕಳು ಚಿತ್ರರಂಗಕ್ಕೆ ಸುಲಭವಾಗಿ ಬರುತ್ತಾರೆ. ಆದರೆ ಹೀಗೆ ಬಂದವರಲ್ಲಿ ಎಲ್ಲರಿಗೂ ಸಕ್ಸಸ್ ಸಿಕ್ಕಿಲ್ಲ.
ಸ್ಟಾರ್ ನಟರ ಮಕ್ಕಳು ಸ್ಟಾರ್ಡಮ್ ಗಿಟ್ಟಿಸಿಕೊಳ್ಳೋಕೆ ಇನ್ನೂ ಪ್ರಯತ್ನ ಪಡುತ್ತಿದ್ದಾರೆ. ಯಾರೆಲ್ಲಾ ನಟರ ಮಕ್ಕಳು ಸ್ಟಾರ್ ಪಟ್ಟ ಪಡೆಯುವ ದಾರಿಯಲ್ಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕನ್ನಡ ಚಿತ್ರರಂಗದಲ್ಲಿ ಟೈಗರ್ ಎಂದೇ ಪ್ರಖ್ಯಾತಿ ಹೊಂದಿದ್ದ ನಟ ಪ್ರಭಾಕರ್. ಮೂರು ದಶಕಗಳ ಕಾಲ ಬಹುಭಾಷಾ ನಟನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ಟೈಗರ್ ಪ್ರಭಾಕರ್ ಇಂದಿಗೂ ಸಿನಿಪ್ರಿಯರ ಮನಸ್ಸಿನಲ್ಲಿ ಉಳಿದಿದ್ದಾರೆ. ಆದರೆ ಟೈಗರ್ ಪ್ರಭಾಕರ್ ತನಷ್ಟೇ ಗಟ್ಟಿಮುಟ್ಟಾದ ಮಗನನ್ನು ಚಿತ್ರರಂಗಕ್ಕೆ ನೀಡಿದ್ದಾರೆ. ಅವರೇ ವಿನೋದ್ ಪ್ರಭಾಕರ್.
ಪ್ರಭಾಕರ್ ರೀತಿಯೇ ಫಿಟ್ನೆಸ್ ದೇಹ ಹೊಂದಿರುವ ನಟ ವಿನೋದ್ ಪ್ರಭಾಕರ್ 2015 ರಲ್ಲಿ 'ಗಡಿಪಾರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಸ್ಯಾಂಡಲ್ವುಡ್ನಲ್ಲಿ ಒಂದು ದಶಕವನ್ನು ಪೂರೈಸಿದರೂ ಕೂಡಾ ಇನ್ನೂ ಸರಿಯಾಗಿ ಸಕ್ಸಸ್ ದೊರೆತಿಲ್ಲ. ಈ ಚಿತ್ರದ ನಂತರ ಮರಿ ಟೈಗರ್, ಗಜೇಂದ್ರ, ಹೋರಿ, ಟೈಸನ್, ಕ್ರ್ಯಾಕ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇಂದಿಗೂ ಗೆಲುವಿಗಾಗಿ ಹೋರಾಡುತ್ತಿದ್ದಾರೆ.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು 60ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ತನ್ನ ವಿಭಿನ್ನ ಹಾವ-ಭಾವದಿಂದಲೇ ನೆಗೆಟಿವ್ ಪಾತ್ರಗಳಿಗೆ ಮೆರುಗು ತಂದ ನಟ ದೇವರಾಜ್. ನೆಗೆಟಿವ್ ಪಾತ್ರಗಳಿಂದ ಹೀರೋ ಆಗಿ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ತನ್ನ ಖದರ್ ತೋರಿಸಿದ ದೇವರಾಜ್, ಡೈನಾಮಿಕ್ ಸ್ಟಾರ್ ಎಂದು ಬಿರುದು ಪಡೆದಿದ್ದಾರೆ.
ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ 2007 ರಲ್ಲಿ ಬಿಡುಗಡೆಯಾದ 'ಸಿಕ್ಸರ್' ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಡೈನಾಮಿಕ್ ಪ್ರಿನ್ಸ್ ಎಂದು ಅಭಿಮಾನಿಗಳಿಂದ ಹೆಸರು ಪಡೆದರೂ ಅಪ್ಪನಿಗೆ ದೊರೆತಷ್ಟು ಸ್ಟಾರ್ ಪಟ್ಟ ಪ್ರಜ್ವಲ್ ಅವರಿಗೆ ದೊರೆತಿಲ್ಲ. ಮೆರವಣಿಗೆ, ಗುಲಾಮ, ಮುರಳಿ ಮೀಟ್ಸ್ ಮೀರಾ, ಸೂಪರ್ ಶಾಸ್ತ್ರಿ, ಗಲಾಟೆ ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿರುವ ಪ್ರಜ್ವಲ್ ದೇವರಾಜ್ ಅವರ ಯಾವುದೇ ಸಿನಿಮಾ ಇದುವರೆಗೂ 100 ದಿನಗಳನ್ನು ಪೂರೈಸಿಲ್ಲ. ಈಗಲೂ ಯಶಸ್ಸಿಗಾಗಿ ಕಾಯುತ್ತಿದ್ದಾರೆ ಪ್ರಜ್ವಲ್.
ಇನ್ನು ಕನ್ನಡ ಚಿತ್ರರಂಗದಲ್ಲಿ ಮಡಿವಂತಿಕೆ ಬಿಟ್ಟು, ಬಹುತೇಕ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್ಗಳಿಂದಲೇ ಫೇಮಸ್ ಆದ ನಟ, ನಿರ್ದೇಶಕ ಕಾಶಿನಾಥ್. ಉಪೇಂದ್ರ, ಮನೋಹರ್, ಸುನಿಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಕಾಶಿನಾಥ್ಗೆ ಸಲ್ಲುತ್ತದೆ. ಇಂತಹ ಪ್ರತಿಭಾವಂತನ ಮಗ ಅಭಿಮನ್ಯು. 'ಬಾಜಿ' ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಭಿಮನ್ಯು ಕೂಡಾ ಸ್ಯಾಂಡಲ್ವುಡ್ನಲ್ಲಿ ಅಪ್ಪನಂತೆ ಸಕ್ಸಸ್ ಆಗಲಿಲ್ಲ. ಕಾಶಿನಾಥ್ ಕೂಡಾ ತಾವು ಬದುಕಿರುವಾಗಲೇ ಪುತ್ರನಿಗೆ ಚಿತ್ರರಂಗದಲ್ಲಿ ಒಂದು ನೆಲೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಅದು ಯಶಸ್ವಿಯಾಗಲಿಲ್ಲ.ಈಗ ತಂದೆ ನಿಧನದ ಬಳಿಕ ಅಭಿಮನ್ಯು 'ಎಲ್ಲಿಗೆ ಪಯಣ ಯಾವುದು ದಾರಿ' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಲಾದರೂ ಅವರಿಗೆ ಸಕ್ಸಸ್ ಸಿಗಲಿದೆಯಾ ಕಾದು ನೋಡಬೇಕು.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು ಅಭಿಮನ್ಯು ಅವರಂತೆ ಸ್ಯಾಂಡಲ್ವುಡ್ನಲ್ಲಿ ಗೆಲ್ಲೋದಿಕ್ಕೆ ಸರ್ಕಸ್ ಮಾಡುತ್ತಿರುವ ನಟ ಧರ್ಮ ಕೀರ್ತಿರಾಜ್. 60ರ ದಶಕದಲ್ಲಿ ಖಳನಟನಾಗಿ ಬೇಡಿಕೆ ಹೊಂದಿದ್ದ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್. 2009ರಲ್ಲಿ ತೆರಕಂಡ 'ನವಗ್ರಹ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧರ್ಮ ಕೀರ್ತಿರಾಜ್ ಕನ್ನಡ ಚಿತ್ರರಂಗದಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಆದರೆ ಇದುವರೆಗೂ ಮಾಡಿದ ಯಾವ ಸಿನಿಮಾಗಳು ಕೂಡಾ ಅವರಿಗೆ ಬ್ರೇಕ್ ನೀಡಲಿಲ್ಲ. ಸದ್ಯಕ್ಕೆ ಒಲವೇ ವಿಸ್ಮಯ, ಚಾಣಾಕ್ಷ, ಮಮ್ತಾಜ್, ತಲ್ವಾರ್ ಹೀಗೆ ಹಲವು ಸಿನಿಮಾಗಳಲ್ಲಿ ಧರ್ಮ ಬ್ಯುಸಿ ಇದ್ದಾರೆ.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕ ನಟ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಪುತ್ರ ಲೋಕೇಶ್. ಚಿತ್ರರಂಗದಲ್ಲಿ ನಾಯಕ, ಪೋಷಕ ನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ರಾರಾಜಿಸಿದ ಲೋಕೇಶ್ ಮಗ ಸೃಜನ್ ಲೋಕೇಶ್ ಅವರಿಗೆ ತಂದೆ ಹಾಗೂ ತಾತನ ರೀತಿ ಇನ್ನೂ ಸ್ಟಾರ್ ಪಟ್ಟ ಸಿಕ್ಕಿಲ್ಲ. 'ನೀಲ ಮೇಘ ಶ್ಯಾಮ' ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಸೃಜನ್ ಲೋಕೇಶ್ ನಂತರ ಮಾಡಿದ ಸಿನಿಮಾಗಳು ಅಷ್ಟೇನೂ ಹೆಸರು ನೀಡಲಿಲ್ಲ. ಹೀಗಾಗಿ ಸೃಜನ್ ಲೋಕೇಶ್ ಹೀರೋ ಬಿಟ್ಟು, ಪೋಷಕ ಪಾತ್ರಗಳಿಗೆ ಸೀಮಿತರಾಗಿದ್ದರು. ಬಹಳ ವರ್ಷಗಳ ನಂತರ ಮತ್ತೆ ಹರಿಪ್ರಿಯಾ ಅವರೊಂದಿಗೆ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಳಿದರೂ ಈ ಸಿನಿಮಾ ಕೂಡಾ ಅವರ ಕೈ ಹಿಡಿಯಲಿಲ್ಲ.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು ವರನಟ ಡಾ. ರಾಜ್ಕುಮಾರ್ ಕುಟುಂಬ ಎಂದರೆ ಇಡೀ ರಾಜ್ಯಕ್ಕೆ ಒಂದು ರೀತಿಯ ಗೌರವ ಇದೆ. ಈ ಕುಟುಂಬದಿಂದ ರಾಘವೇಂದ್ರ ರಾಜ್ಕುಮಾರ್ ಪುತ್ರ ವಿನಯ್ ರಾಜ್ಕುಮಾರ್ ಚಿತ್ರರಂಗಕ್ಕೆ ಬಂದರು. ಬಾಲ ನಟನಾಗಿ ತಾತನ ಜೊತೆ ಒಡ ಹುಟ್ಟಿದವರು, ಆಕಸ್ಮಿಕ, ಅನುರಾಗದ ಅಲೆಗಳು ಚಿತ್ರಗಳಲ್ಲಿ ನಟಿಸಿದ್ದ ವಿನಯ್ ರಾಜ್ ಕುಮಾರ್, 2015ರಲ್ಲಿ 'ಸಿದ್ದಾರ್ಥ್' ಚಿತ್ರದ ಮೂಲಕ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದ ಬಳಿಕ ಮೂರು ಸಿನಿಮಾ ಮಾಡಿದರೂ, ವಿನಯ್ ರಾಜ್ಕುಮಾರ್ಗೆ ಇನ್ನೂ ತಾತ, ತಂದೆ, ದೊಡ್ಡಪ್ಪ ಹಾಗೂ ಚಿಕ್ಕಪ್ಪನ ರೀತಿ ಸ್ಟಾರ್ಡಮ್ ಸಿಕ್ಕಿಲ್ಲ. ಸದ್ಯಕ್ಕೆ ಅವರ ಕೈಯ್ಯಲ್ಲಿ 'ಗ್ರಾಮಾಯಣ ' ಸಿನಿಮಾ ಇದೆ.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ನಿರ್ಮಾಪಕ ಎಂದೇ ಖ್ಯಾತರಾದ ವೀರಾಸ್ವಾಮಿ ಹಾಗೂ ಕನಸುಗಾರ, ಕ್ರೇಜಿಸ್ಟಾರ್ ಎಂದೇ ಹೆಸರಾದ ರವಿಚಂದ್ರನ್ ಕುಟುಂಬದ ಕುಡಿ ಮನೋರಂಜನ್. ಇವರು 'ಸಾಹೇಬ' ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ 'ಬೃಹಸ್ಪತಿ' ಚಿತ್ರದಲ್ಲಿ ನಟಿಸಿದರೂ ಸಕ್ಸಸ್ ಆಗಲಿಲ್ಲ. ನಂತರ ತಮ್ಮ ಹೆಸರನ್ನು ಮನುರಂಜನ್ ಎಂದು ಬದಲಿಸಿಕೊಂಡು 'ಮುಗಿಲುಪೇಟೆ' ಚಿತ್ರದ ಮೂಲಕ ಗೆಲ್ಲುವ ತವಕದಲ್ಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕಾಗಿ ಎದುರು ನೋಡುತ್ತಿರುವ ನಟ ಅಭಿಷೇಕ್ ಅಂಬರೀಷ್. 'ಅಮರ್' ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಷ್ಗೆ ದೊಡ್ಡ ಮಟ್ಟದ ಸಿನಿಮಾ ಹಿನ್ನೆಲೆ ಇದೆ. ಆದರೆ ಅಭಿಷೇಕ್ ಅಂದುಕೊಂಡಂತೆ ಸಕ್ಸಸ್ ಕಾಣಲಿಲ್ಲ.ಈಗ ಮತ್ತೆ ಎರಡನೇ ಸಿನಿಮಾಗೆ ರೆಡಿಯಾಗುತ್ತಿರುವ ಅಭಿಷೇಕ್, ಸ್ಟಾರ್ ಗಿರಿ ಪಡೆಯೋಕೆ ಸಾಕಷ್ಟು ಹೋಂವರ್ಕ್ ಮಾಡುತ್ತಿದ್ದಾರೆ. ತಂದೆ ರೆಬಲ್ ಸ್ಟಾರ್ ಅವರಂತೆ ಅಭಿಷೇಕ್ ಸಕ್ಸಸ್ ಆಗುತ್ತಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.
ಸಕ್ಸಸ್ ಕಾಣದ ಸ್ಟಾರ್ ನಟರ ಮಕ್ಕಳು ಈ ನಟರೆಲ್ಲಾ ತಮ್ಮ ತಂದೆಯರಂತೆ ಆದಷ್ಟು ಬೇಗ ಯಶಸ್ಸು ಗಳಿಸಿ ಸ್ಟಾರ್ ಪಟ್ಟ ಪಡೆಯಲಿ ಎಂಬುದೇ ನಮ್ಮ ಆಶಯ.