ಚಿತ್ರರಂಗದಲ್ಲಿ ಅದ್ಧೂರಿ ಮುಹೂರ್ತ ಆಚರಿಸಿಕೊಂಡ ಎಷ್ಟೋ ಸಿನಿಮಾಗಳು ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತುಹೋಗುತ್ತದೆ. ಕೆಲವೊಂದು ಸಿನಿಮಾಗಳು ಶೂಟಿಂಗ್ ಹಂತದಲ್ಲಿ ನಿಂತರೆ ಮತ್ತೆ ಕೆಲವು ಶೂಟಿಂಗ್ ಮುಗಿದರೂ ಪೋಸ್ಟ್ ಪ್ರೊಡಕ್ಷನ್ ಶುರು ಆಗುವುದಿಲ್ಲ. ಇನ್ನೂ ಕೆಲವು ಪೋಸ್ಟ್ ಪ್ರೊಡಕ್ಷನ್ ಮುಗಿದರೂ ಬಿಡುಗಡೆಯ ಭಾಗ್ಯ ಕಾಣುವುದಿಲ್ಲ.
ಈ ರೀತಿ ಅರ್ಧಕ್ಕೆ ನಿಲ್ಲುವ ಸಿನಿಮಾಗಳಲ್ಲಿ ಬಹುತೇಕ ಬಜೆಟ್ ಕಾರಣದಿಂದ ನಿಂತಿವೆ. ಈ ಸಿನಿಮಾಗಳ ಪೈಕಿ ಸ್ಟಾರ್ ನಟರ ಸಿನಿಮಾಗಳು ಕೂಡಾ ಇವೆ. ಅಲ್ಲದೆ ಇದು ಇಂದು ನಿನ್ನೆಯದಲ್ಲ. ಡಾ. ರಾಜ್ಕುಮಾರ್ ಕಾಲದಿಂದಲೂ ಸಿನಿಮಾಗಳು ಪೂರ್ತಿಯಾಗದೆ ಅರ್ಧಕ್ಕೆ ನಿಂತಿವೆ.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಭಕ್ತ ಅಂಬರೀಶ
ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಕನಸಿನ ಸಿನಿಮಾ 'ಭಕ್ತ ಅಂಬರೀಷ '. ಈ ಸಿನಿಮಾ ಮಾಡಬೇಕು ಅನ್ನೋದು ಅಣ್ಣಾವ್ರ ಬಹುದೊಡ್ಡ ಆಸೆಯಾಗಿತ್ತು. ಭಕ್ತ ಅಂಬರೀಷ ಸಿನಿಮಾಗೆ ಸಿಂಪಲ್ ಆಗಿ ಪೂಜೆ ಮಾಡಿ, ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೂಡಾ ಶುರುವಾಗಿತ್ತು. ರೇಣುಕಾ ಶರ್ಮಾ ಈ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ರು, ಅಣ್ಣಾವ್ರ ಬ್ಯಾನರ್ನಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಬೇಕು ಅಂತಾ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕನಸು ಕಂಡಿದ್ರು. ಪಾರ್ವತಮ್ಮ ರಾಜ್ ಕುಮಾರ್, 30 ಲಕ್ಷ ರೂಪಾಯಿ ಖರ್ಚು ಮಾಡಿ, ಭಕ್ತ ಅಂಬರೀಷ ಚಿತ್ರದ 8 ಹಾಡುಗಳನ್ನು ಸಂಗೀತ ನಿರ್ದೇಶಕ ಹಂಸಲೇಖ ಬಳಿ ಸಂಯೋಜನೆ ಮಾಡಿಸಿದ್ರು.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಆದರೆ ಅಷ್ಟರಲ್ಲಿ ವೀರಪ್ಪನ್ನಿಂದ ಅಣ್ಣಾವ್ರು ಕಿಡ್ನಾಪ್ ಆದರು. ನಂತರ ಕಾಡಿನಿಂದ ಹಿಂತಿರುಗಿದ ಬಳಿಕ ಮಂಡಿ ನೋವಿನಿಂದ ಬಳಲುತ್ತಿದ್ದರು. ನಂತರದ ದಿನಗಳಲ್ಲಿ ಮಂಡಿ ನೋವು ತೀವ್ರವಾಗಿ ಕಡೆಗೂ 'ಭಕ್ತ ಅಂಬರೀಷ ' ಚಿತ್ರದಲ್ಲಿ ನಟಿಸಲು ಸಾಧ್ಯವಾಗದೇ ಅದು ರಾಜ್ ಕುಮಾರ್ ಕನಸಾಗಿ ಉಳಿದು ಬಿಡ್ತು ಎಂದು ಕೆಲವು ಸಂದರ್ಶನಗಳಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಹೇಳಿದ್ದಾರೆ.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಮುರುಧನಾಯಗಂ
ಇನ್ನು ಅಣ್ಣಾವ್ರ ಬಳಿಕ ವಿಷ್ಣುವರ್ಧನ್ ಅಭಿನಯದ ಬಹು ಕೋಟಿ ವೆಚ್ಚದ ಸಿನಿಮಾವೊಂದು, 1997ರಲ್ಲಿ ಅದ್ದೂರಿ ಮುಹೂರ್ತ ಆಗಿ ನಿಂತು ಹೋಯ್ತು. ಚಿತ್ರವನ್ನು ಕಮಲ್ ಹಾಸನ್ ನಿರ್ದೇಶಿಸಲು ನಿರ್ಧರಿಸಿದ್ದರು. ಚಿತ್ರದ ಹೆಸರು 'ಮುರುಧನಾಯಗಂ '. ಈ ಚಿತ್ರದ ಮುಹೂರ್ತಕ್ಕೆ ಇಂಗ್ಲೆಂಡ್ ರಾಣಿ ಎಲಿಜಿಬೆತ್ ಬಂದಿದ್ದರು ಎನ್ನುವುದು ದೊಡ್ಡ ವಿಚಾರ. 18ನೇ ಶತಮಾನದ ಯೋಧ ಮಹಮ್ಮದ್ ಯುಸೂಫ್ ಖಾನ್ ಜೀವನವನ್ನು ಆಧಾರವಾಗಿಟ್ಟುಕೊಂಡು, ಕಮಲ್ ಹಾಸನ್ ಚಿತ್ರವನ್ನು ಮಾಡಲು ಹೊರಟ್ಟಿದ್ದರು.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಈ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ವಜೀದ್ ಖಾನ್ ಎಂಬ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚದಲ್ಲಿ ಕಮಲ್ ಹಾಸನ್ ಈ ಚಿತ್ರವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದ್ದರು. ಬಹುತೇಕ ಡಾ. ವಿಷ್ಣುವರ್ಧನ್ ಭಾಗದ ಶೂಟಿಂಗ್ ಕೂಡಾ ಮುಗಿದು ಹೋಗಿತ್ತು.ಆದರೆ ಕಾರಣಾಂತಗಳಿಂದ ಮುರುಧನಾಯಗಂ ಸಿನಿಮಾ ನಿಂತುಹೋಗಿದೆ.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಮಂಜಿನ ಹನಿ
ಕನ್ನಡ ಚಿತ್ರರಂಗದ ಕನಸುಗಾರ ಅಂತಾ ಕರೆಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಸಿನಿಮಾ ಜರ್ನಿಯಲ್ಲಿ ಕೆಲವೊಂದು ಸಿನಿಮಾಗಳು ಮುಹೂರ್ತ ಹಾಗೂ ಮತ್ತೆ ಕೆಲವು ಸಿನಿಮಾಗಳು ಶೂಟಿಂಗ್ ಆಗಿ ಅರ್ಧಕ್ಕೆ ನಿಂತಿವೆ. ಅದರಲ್ಲಿ 'ಮಂಜಿನ ಹನಿ ' ಕೂಡಾ ಒಂದು. 2015 ರಲ್ಲಿ ಆರಂಭವಾಗಿದ್ದ ಮಂಜಿನ ಹನಿ ರವಿಚಂದ್ರನ್ ಅವರ ಕನಸಿನ ಚಿತ್ರ. ಈ ಚಿತ್ರದಲ್ಲಿ ಸುಮಾರು 9 ಶೇಡ್ಗಳಲ್ಲಿ ಕಾಣಿಸಿಕೊಳ್ಳಲು ರವಿಮಾಮ ರೆಡಿಯಾಗಿದ್ದರು. ಚಿತ್ರವನ್ನು 9 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಿ ಮಾಡಲು ನಿರ್ಧರಿಸಿದ್ದರು. ಆದರೆ ಬಜೆಟ್ ಕಾರಣ ಚಿತ್ರ ಮುಂದುವರೆಯಲಿಲ್ಲ. ಆದರೂ ರವಿಚಂದ್ರನ್ ಸಿಕ್ಕಾಗಲೆಲ್ಲಾ ಅಭಿಮಾನಿಗಳು ಮಾತ್ರ ಈ ಸಿನಿಮಾ ಬಗ್ಗೆ ಕೇಳೋದನ್ನು ಬಿಟ್ಟಿಲ್ಲ.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಬ್ರಹ್ಮ
ರೆಬಲ್ ಸ್ಟಾರ್ ಅಂಬರೀಷ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿರುವ ಸಿನಿಮಾ ವೀರ ಪರಂಪರೆ. ಆದರೆ ಈ ಚಿತ್ರಕ್ಕಿಂತ ಮುನ್ನ ಇಬ್ಬರೂ 'ಬ್ರಹ್ಮ ' ಎಂಬ ಚಿತ್ರದಲ್ಲಿ ಜೊತೆಗೆ ನಟಿಸಬೇಕಿತ್ತು. ವಿಶೇಷ ಎಂದರೆ ಇದು ಸುದೀಪ್ ಅಭಿನಯದ ಮೊದಲ ಸಿನಿಮಾ. ಕುಳ್ಳ ಶಾಂತಕುಮಾರ್ ಎಂದೇ ಹೆಸರಾದ ನಿರ್ಮಾಪಕ ಶಾಂತಕುಮಾರ್ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರವನ್ನು ಮಾಡಲು ಮುಂದಾಗಿದ್ದರು. ಓಂ ಪ್ರಕಾಶ್ ರಾವ್ ಬ್ರಹ್ಮ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದರು. ಆದರೆ ಬಜೆಟ್ ಹೆಚ್ಚಾದ ಕಾರಣ ಸಿನಿಮಾ ನಿಂತು ಹೋಯ್ತು.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಜಿಲ್ಲಾಧಿಕಾರಿ
ಸ್ಟಾರ್ ನಟರ ಪೈಕಿ ಹೀಗೆ ಅರ್ಧಕ್ಕೆ ನಿಂತಿರುವ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಿನಿಮಾಗಳು ಕೂಡಾ ಇವೆ. ಜಿಲ್ಲಾಧಿಕಾರಿ, ಕಲ್ಕಿ, ಗೆಳೆಯ ಗೆಳೆಯ, ದಂಗೆ ಹೀಗೆ ಹಲವು ಸಿನಿಮಾಗಳು ಮುಹೂರ್ತ ಆಗಿ ಅರ್ಧಕ್ಕೆ ನಿಂತಿವೆ. ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ, ನಿರ್ಮಾಪಕ ಕನಕಪುರ ಶ್ರೀನಿವಾಸ್ ನಿರ್ಮಾಣದಲ್ಲಿ 'ಜಿಲ್ಲಾಧಿಕಾರಿ' ಸಿನಿಮಾವನ್ನು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಮುಹೂರ್ತ ಮಾಡಲಾಗಿತ್ತು. ಆದರೆ ಕೆಲವು ದಿನಗಳ ನಂತರ ಕಾರಣಾಂತರಗಳಿಂದ ಈ ಚಿತ್ರ ನಿಂತು ಹೋಯ್ತು.
ಇದರೊಂದಿಗೆ ನಿರ್ದೇಶಕ ನಾಗಾಭರಣ ಜೊತೆ 'ಗೆಳೆಯ ಗೆಳೆಯ ' ಎಂಬ ಸಿನಿಮಾ ಮುಹೂರ್ತ ಮಾಡಲಾಗಿತ್ತು. ಆ ಸಿನಿಮಾ ಕೂಡಾ ಶೂಟಿಂಗ್ ಮಾಡಿ ಅರ್ಧಕ್ಕೆ ನಿಂತು ಹೋಯ್ತು. ಇನ್ನು ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಹೆಸರಿಡದ ಚಿತ್ರಗಳು ಪೂಜೆ ಆಗಿ ಅರ್ಧಕ್ಕೆ ನಿಂತು ಹೋಗಿವೆ.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮ್ಯಾ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ' ಸಿನಿಮಾ ನಿಂತು ಹೋಗಿ ವರ್ಷಗಳೇ ಕಳೆದಿದೆ. ಉಪೇಂದ್ರ, ರಮ್ಯಾ ಹಾಗೂ ನಾಲ್ವರು ಬಾಲ ಕಲಾವಿದರನ್ನು ಒಳಗೊಂಡ ಈ ಚಿತ್ರದಲ್ಲಿ ಅನಿಮೇಷನ್ ಮತ್ತು ವಿಜ್ಯುವಲ್ ಎಫೆಕ್ಟ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಒಂದು ಅನಿಮೇಟೆಡ್ ಪಾತ್ರವನ್ನು ಕೂಡಾ ಸೃಷ್ಟಿಸಲಾಗಿರುವ ಈ ಚಿತ್ರ ಭಯೋತ್ಪಾದಕರೊಂದಿಗಿನ ಹೋರಾಟದ ಕಥೆ ಒಳಗೊಂಡಿದೆ. ಈ ಸಿನಿಮಾ ಕೂಡಾ ಬಜೆಟ್ ಕಾರಣದಿಂದ ಅರ್ಧಕ್ಕೆ ನಿಂತು ಹೋಯ್ತು.
ಅರ್ಧಕ್ಕೆ ನಿಂತ ಸ್ಟಾರ್ ನಟರ ಚಿತ್ರಗಳು ಮಯೂರ
'ಮಯೂರ ' ಸಿನಿಮಾ ಅಂದ್ರೆ ಡಾ. ರಾಜ್ ಕುಮಾರ್ ಅಭಿನಯದ ಚಿತ್ರ ನೆನಪಾಗುತ್ತೆ. ಆದ್ರೆ ಮಯೂರ ಎಂಬ ಟೈಟಲ್ ಹೆಸರಿನಲ್ಲಿ ಪುನೀತ್ ರಾಜ್ಕುಮಾರ್ ಸಿನಿಮಾವೊಂದು ಸೆಟ್ಟೇರಿತ್ತು ಅನ್ನೋದು ಅದೆಷ್ಟೋ ಜನಕ್ಕೆ ಗೊತ್ತಿಲ್ಲ. ತೆಲುಗು ನಿರ್ದೇಶಕ ಶೋಭನ್ ಎಂಬುವರು ಮಯೂರ ಅಂತಾ ಟೈಟಲ್ ಇಟ್ಟು, ಈ ಸಿನಿಮಾದ ಮುಹೂರ್ತವನ್ನು ಇಸ್ಕಾನ್ ದೇವಸ್ಥಾನದಲ್ಲಿ ಮಾಡಿದ್ದರು. ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ರು. ಆದರೆ ಈ ಸಿನಿಮಾ ಪೂಜೆ ಆಗಿ ಒಂದು ವಾರಕ್ಕೆ ನಿರ್ದೇಶಕ ಶೋಭನ್ ಸಾವನ್ನಪ್ಪಿದ ಕಾರಣ ಮಯೂರ ಸಿನಿಮಾ ನಿಂತು ಹೋಯ್ತು.
ಇನ್ನು ಈ ಸ್ಟಾರ್ ಕುಟುಂಬದ ಕುಡಿಗಳಲ್ಲಿ ರವಿಚಂದ್ರನ್ ಮಕ್ಕಳಾದ ಮನುರಂಜನ್ ಮೊದಲ ಸಿನಿಮಾ 'ರಣಧೀರ ', ಎರಡನೇ ಮಗ ವಿಕ್ರಮ್ ನಟಿಸಬೇಕಿದ್ದ 'ನವೆಂಬರ್ನಲ್ಲಿ ನಾನು ಅವಳು', ರಾಘವೇಂದ್ರ ರಾಜ್ ಕುಮಾರ್ ದೊಡ್ಡ ಮಗ ವಿನಯ್ ರಾಜ್ ಕುಮಾರ್ ಅಭಿನಯದ 'ಆರ್.ಕೆ ' ಹೀಗೆ ಸ್ಟಾರ್ ನಟರಿಂದ ಹಿಡಿದು ಯುವ ನಾಯಕರ ಬಹಳಷ್ಟು ಸಿನಿಮಾಗಳು ಆರಂಭವಾಗಿ ಅರ್ಧಕ್ಕೆ ನಿಂತಿವೆ.