ಬೆಂಗಳೂರು: ಎರಡು ತಿಂಗಳುಗಳಿಂದ ಸದ್ದಿಲ್ಲದೆ ಇದ್ದ ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ. ಲಾಕ್ಡೌನ್ ಹಂತಹಂತವಾಗಿ ತೆರವಾಗಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಚಿತ್ರೀಕರಣ ಶುರುವಾಗಿದ್ದು, ಇದೀಗ ಚಿತ್ರದ ವಿಶೇಷ ಪೋಸ್ಟರ್ವೊಂದನ್ನು ಬಿಡುಗಡೆ ಮಾಡಲಾಗಿದೆ.
ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜತೆಯಾಗಿ ನಟಿಸುತ್ತಿದ್ದು, ಇದಕ್ಕೂ ಮೊದಲು ಇಬ್ಬರು ಇರುವ ಪೋಸ್ಟರ್ಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆ ಇರುವ ಹಾಲಿವುಡ್ ಶೈಲಿಯ ಪೋಸ್ಟರ್ ರಿಲೀಸ್ ಆಗಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ 'ಕಬ್ಜ' ಎಂದು ಬರೆದಿರುವ ಪೋಸ್ಟರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.