ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಕಳೆದ ವರ್ಷವೇ ಸೆನ್ಸಾರ್ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಬಿಡುಗಡೆಯಾಗುವುದರ ಜೊತೆಗೆ ಹಲವಾರು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರಶಸ್ತಿಗಳನ್ನು ಗಳಿಸಿರಬೇಕಿತ್ತು. ಆದರೆ, ಲಾಕ್‍ಡೌನ್‍ನಿಂದ ಯಾವುದೂ ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ಸಿನಿಮಾ ರೋಮ್ ಮತ್ತು ಢಾಕಾ ಚಿತ್ರೋತ್ಸವಕ್ಕೆ ಪ್ರದರ್ಶನವಾಗುವುದಕ್ಕೆ ಆಯ್ಕೆಯಾಗಿತ್ತು.
'ಇಲ್ಲಿರಲಾರೆ ಅಲ್ಲಿ ಹೋಗಲಾರೆ' ಸಿನಿಮಾ ಈಗ ರೋಮ್ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದೆ. ರೋಮ್ ಚಿತ್ರೋತ್ಸವದ ಏಷ್ಯನ್ ಕಾಂಪಿಟೇಶನ್ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ. ರೋಮ್‍ನಲ್ಲಿ ನಡೆದ ಏಷ್ಯಾಟಿಕಾ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಡಿಸೆಂಬರ್ 12ರಂದು ಪ್ರದರ್ಶನಗೊಂಡಿತ್ತು. ಈಗ ಚಿತ್ರವು ಪ್ರಶಸ್ತಿ ಪಡೆದಿರುವುದು ವಿಶೇಷ. ಜಯಂತ ಕಾಯ್ಕಿಣಿ ಅವರ 'ಹಾಲಿನ ಮೀಸೆ' ಎಂಬ ಕಥೆಯನ್ನು ಆಧರಿಸಿದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಸಮಾಕಾಲೀನ ಸಾಮಾಜಿಕ ಜ್ವಲಂತ ಧ್ವಂಧ್ವವನ್ನು ಹೇಳುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ಜನರ ಪಯಣ ನೆಮ್ಮದಿಗೆ ಭಂಗವಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಚಿತ್ರದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ.