ಭಾರತ ಚಿತ್ರರಂಗ ಕಂಡ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ 16 ಭಾಷೆಗಳು ಹಾಗೂ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಹಾಡುಗಳಿಂದಲೇ ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಕದ್ದಿರುವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಅವರೇ ಸರಿಸಾಟಿ.
ಕನ್ನಡದೊಂದಿಗೆ ಎಸ್ಪಿಬಿ ನಂಟು ಆಂಧ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಹುಟ್ಟಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾಯಕರಾಗಿ ಹೊರಹೊಮ್ಮಿದ್ದೇ ಒಂದು ಇಂಟ್ರಸ್ಟಿಂಗ್ ಕಥೆ. ಹರಿಕಥೆ ವಿದ್ವಾಂಸರ ಕುಟುಂಬದಲ್ಲಿ ಜನಿಸಿದ ಎಸ್ಪಿಬಿ ಗಾಯಕರಾಗಲು ತಂದೆ ಎಸ್.ಪಿ. ಸಾಂಬಮೂರ್ತಿಯವರೇ ಸ್ಫೂರ್ತಿ. ಗಾಯನದ ತರಬೇತಿ ಪಡೆಯದೆ ಎಸ್ಪಿಬಿ ಹಾರ್ಮೋನಿಯಂ, ಕೊಳಲುಗಳನ್ನು ತಮ್ಮಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತ ಆಗಿದ್ದು ರೋಚಕ.
ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಮಾತುಗಾರರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೂ ಹೆಸರಾಗಿದ್ದ ಎಸ್ಪಿಬಿ ಕರ್ನಾಟದ ಜೊತೆ ಒಂದು ಅವಿಸ್ಮರಣಿಯ ಬಾಂಧವ್ಯ ಹೊಂದಿದ್ದಾರೆ.
ಕನ್ನಡದೊಂದಿಗೆ ಎಸ್ಪಿಬಿ ನಂಟು 1967ರಲ್ಲಿ ಬಿಡುಗಡೆಯಾದ 'ನಕ್ಕರೇ ಅದೇ ಸ್ವರ್ಗ' ಸಿನಿಮಾ ಮೂಲಕ, ಹಿನ್ನೆಲೆ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಎಸ್ಪಿಬಿ ಬಂದರು. ಜಯಂತಿ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರಕ್ಕೆ ಎಂ. ರಂಗರಾವ್ ಸಂಗೀತ ನಿರ್ದೇಶಿಸಿದ್ದರು. ಎಸ್ಪಿಬಿ ಕಂಠ ಸಿರಿಯಲ್ಲಿ ಕನಸಿದೋ...ನನಸಿದೋ ಎಂಬ ಹಾಡನ್ನು ರಂಗರಾವ್ ಹಾಡಿಸುತ್ತಾರೆ.
ಕನ್ನಡ ಮಾತನಾಡಲು ಬರದಿದ್ದರೂ ಎಸ್ಪಿಬಿ ತಮ್ಮ ಮಧುರ ಕಂಠದಿಂದ ಇವರು ಕನ್ನಡಿಗರೇ ಇರಬಹುದು ಎನ್ನುವಂತೆ ಬಹಳ ಸ್ಪಷ್ಟವಾಗಿ ಹಾಡಲು ಆರಂಭಿಸುತ್ತಾರೆ. ಆ ವೇಳೆ ಡಾ. ರಾಜ್ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಫುಲ್ ಟೈಮ್ ಗಾಯಕರಾಗಿದ್ದರು. ನಂತರ ಎಸ್ಪಿಬಿ, ಮಿಸ್ಟರ್ ರಾಜ್ಕುಮಾರ್, ಸಿಐಡಿ ರಾಜಣ್ಣ ಚಿತ್ರದಲ್ಲಿ ಅಣ್ಣಾವ್ರಿಗೆ ಹಾಡುತ್ತಾರೆ.
ಕನ್ನಡದೊಂದಿಗೆ ಎಸ್ಪಿಬಿ ನಂಟು 1972 ರಲ್ಲಿ ತೆರೆಕಂಡ ಡಾ. ವಿಷ್ಣುವರ್ಧನ್ ಮೊದಲ ಚಿತ್ರ 'ನಾಗರಹಾವು' ಅವರಿಗೆ ದೊಡ್ಡ ಹೆಸರು ತಂದುಕೊಡುತ್ತದೆ. ಅವರೊಂದಿಗೆ ಅಂಬರೀಶ್, ಆರತಿ, ಶಿವರಾಮ್ ಸೇರಿದಂತೆ ಸಾಕಷ್ಟು ಕಲಾವಿದರಿಗೆ ಈ ಸಿನಿಮಾ ದೊಡ್ಡ ಮಟ್ಟದ ಬ್ರೇಕ್ ನೀಡುತ್ತದೆ. ಈ ಸಿನಿಮಾದಲ್ಲಿ ಹಾವಿನ ದ್ವೇಷ 12 ವರುಷ..ನನ್ನ ರೋಷ ನೂರು ವರುಷ ಎಂದು ಹಾಡಿದ್ದ ಎಸ್ಪಿಬಿ ಕೂಡಾ ಒಳ್ಳೆ ಹೆಸರು ಸಂಪಾದಿಸುತ್ತಾರೆ.
ಈ ದೊಡ್ಡ ಯಶಸ್ಸಿನ ನಂತರ ಅನಂತ್ನಾಗ್ ಹಾಗೂ ಕಲ್ಪನಾ ಅಭಿನಯದ 'ಬಯಲುದಾರಿ' ಸಿನಿಮಾದ ಕನಸಿನಲೂ ನೀನೇ....ಮನಸಲೂ ನೀನೇ, ಎಲ್ಲಿರುವೇ ಮನವ ಕಾಡುವ ರೂಪಸಿಯೇ ಎಂಬ ಎರಡು ಹಾಡುಗಳನ್ನು ಎಸ್ಪಿಬಿ, ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಹಾಡುತ್ತಾರೆ. ಈ ಎರಡೂ ಹಾಡುಗಳ ಮೂಲಕ ಎಸ್ಪಿಬಿ ಕನ್ನಡಿಗರ ಹೃದಯ ಗೆಲ್ಲುತ್ತಾರೆ.
ಕನ್ನಡದೊಂದಿಗೆ ಎಸ್ಪಿಬಿ ನಂಟು ಈ ಚಿತ್ರದ ಬಳಿಕ ಡಾ ರಾಜ್ ಕುಮಾರ್, ವಿಷ್ಣುವರ್ಧನ್ , ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್, ರವಿಚಂದ್ರನ್, ಶಿವರಾಜ್ ಕುಮಾರ್, ಶ್ರೀನಾಥ್, ಶಶಿಕುಮಾರ್, ರಮೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರ ಸಿನಿಮಾಗಳಿಗೆ ಎಸ್ಪಿಬಿ ಖಾಯಂ ಗಾಯಕರಾಗುತ್ತಾರೆ.
ಎಸ್ಪಿಬಿ ಅವರಿಗೆ ಇತರ ಭಾಷೆಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ಗೌರವ ಮನ್ನಣೆ ದೊರೆಯಿತು ಎಂಬ ವಿಚಾರ ಸಂತೋಷದ ವಿಚಾರ. ಈ ಮಾತನ್ನು ಸ್ವತ: ಎಸ್ಪಿಬಿ ಅನೇಕ ಕಾರ್ಯಕ್ರಮಗಳಲ್ಲಿ ಹೇಳಿಕೊಂಡಿದ್ದಾರೆ. ರಾಜೇಶ್ ಕೃಷ್ಣನ್, ಹೇಮಂತ್ ಕುಮಾರ್, ಬದ್ರಿ ಪ್ರಸಾದ್ ಸೇರಿ ಈಗ ಖ್ಯಾತಿಯಲ್ಲಿರುವ ಬಹಳಷ್ಟು ನಟರು ಎಸ್ಪಿಬಿ ಅವರ ಶಿಷ್ಯರು. ಅದರಲ್ಲೂ ರಾಜೇಶ್ ಕೃಷ್ಣನ್ಗೆ ಎಸ್ಪಿಬಿ ಎಂದರೆ ದೇವರ ಸಮಾನ. ಏಕೆಂದರೆ ರಾಜೇಶ್ ಕೃಷ್ಣನ್ ಗಾಯಕರಾಗುವುದಕ್ಕಿಂತ ಮುನ್ನ ಟ್ರ್ಯಾಕ್ ಸಿಂಗರ್ ಆಗಿದ್ದರು. ಸಿನಿಮಾವೊಂದಕ್ಕೆ ಎಸ್ಪಿಬಿ ಹಾಡ ಬೇಕಾಗಿರುತ್ತದೆ. ಎಸ್ಪಿಬಿ ರೆಕಾರ್ಡಿಂಗ್ ಸ್ಟುಡಿಯೋಗೆ ಬರುವ ಮುನ್ನ, ರಾಜೇಶ್ ಕೃಷ್ಣನ್ ಆ ಹಾಡಿನ ಟ್ರ್ಯಾಕ್ ರೆಡಿ ಮಾಡಿರುತ್ತಾರೆ. ನಾನು ಟ್ರ್ಯಾಕ್ ರೆಡಿ ಮಾಡಿರುವ ಹಾಡನ್ನುಎಸ್ಪಿಬಿ ಹೇಗೆ ಹಾಡುತ್ತಾರೆ ಎಂಬ ಕುತೂಹಲದಿಂದ ರಾಜೇಶ್ ಕೃಷ್ಣನ್ ಊಟ ಕೂಡಾ ಮಾಡದೆ ಕಾಯುತ್ತಿರುತ್ತಾರೆ.
ಕನ್ನಡದೊಂದಿಗೆ ಎಸ್ಪಿಬಿ ನಂಟು ಕೊನೆಗೂ ಎಸ್ಪಿಬಿ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ರಾಜೇಶ್ ಕೃಷ್ಣನ್ ರೆಡಿ ಮಾಡಿದ್ದ ಟ್ರ್ಯಾಕ್ ಹಾಡುತ್ತಾರೆ. ರೆಕಾರ್ಡಿಂಗ್ ಮುಗಿದ ನಂತರ ರಾಜೇಶ್ ಕೃಷ್ಣನ್ ಎಸ್ಪಿಬಿ ಕಾಲಿಗೆ ನಮಸ್ಕರಿಸುತ್ತಾರೆ. ಈ ಘಟನೆ ರಾಜೇಶ್ ಕೃಷ್ಣನ್ ಹಿನ್ನೆಲೆ ಗಾಯಕರಾಗಿ ಮುನ್ನೆಲೆಗೆ ಬರಲು ನೆರವಾಗುತ್ತದೆ. ನನ್ನ ರೀತಿ ಹಾಡುವ ಏಕೈಕ ಗಾಯಕ ರಾಜೇಶ್ ಕೃಷ್ಣನ್ ಎಂದು ಎಸ್ಪಿಬಿ ಅನೇಕ ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.
ಶಾಸ್ರ್ತೀಯ ಸಂಗೀತ ಅಭ್ಯಾಸ ಮಾಡದಿದ್ದರೂ ಎಸ್ಪಿಬಿ ಕನ್ನಡ ಸಿನಿಮಾ ಹಾಡುಗಳಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಗಾಯಕ ಎಂಬ ಖ್ಯಾತಿಗೆ ಪಾತ್ರರಾದವರು. ಹಂಸಲೇಖ ಸಂಗೀತ ನಿರ್ದೇಶನದ 'ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರದ ಉಮಂಡ್...ಗುಮಂಡ್ ಹಾಡಿಗಾಗಿ ಎಸ್ಪಿಬಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಈ ಹಾಡು ಹಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಬಾಲು ಮೊದಲು ಹೇಳಿದ್ದರಂತೆ. ಆದರೆ ನಂತರ ಮನೆಯಲ್ಲಿ ಅಭ್ಯಾಸ ಮಾಡಿ ಈ ಹಾಡನ್ನು ರೆಕಾರ್ಡ್ ಮಾಡಿ ಹಾಡಲು ಸಾಧ್ಯವಿಲ್ಲ ಎಂಬ ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದದ್ದು ಆಶ್ಚರ್ಯದ ವಿಚಾರವೇ ಸರಿ.
ಕನ್ನಡದೊಂದಿಗೆ ಎಸ್ಪಿಬಿ ನಂಟು ಡಾ. ರಾಜ್ಕುಮಾರ್ ಅವರೊಂದಿಗೆ ಹಾಡಬೇಕು ಎನ್ನುವುದು ಎಸ್ಪಿಬಿ ಅವರ ಕನಸಾಗಿತ್ತು. ಆದರೆ ಆ ಸಮಯ ಒದಗಿ ಬರಲಿಲ್ಲ. ಆದ ಕಾರಣ 'ಮುದ್ದಿನ ಮಾವ' ಚಿತ್ರದಲ್ಲಿ ನಾನು ನಟಿಸುವ ಹಾಡಿಗೆ ನೀವು ಹಾಡಬೇಕು ಎಂದು ಡಾ.ರಾಜ್ ಅವರನ್ನು ಕೇಳಿದ್ದರಂತೆ. ನಿಮ್ಮಂತ ಮಹಾನ್ ಗಾಯಕ ಇರುವಾಗ ನಾನು ಹೇಗೆ ಹಾಡಲಿ ಎಂದು ಡಾ. ರಾಜ್ ಮೊದಲು ಒಪ್ಪಿರಲಿಲ್ಲ. ಆದರೆ ಎಸ್ಪಿಬಿ ಅವರ ಕೋರಿಕೆಯ ಮೇರೆಗೆ ಒಪ್ಪಿ ದೀಪಾವಳಿ..ದೀಪಾವಳಿ ಹಾಡನ್ನು ಡಾ. ರಾಜ್ ಹಾಡಿದ್ದರು. ಈ ಹಾಡು ಇಂದಿಗೂ ಬಹಳ ಫೇಮಸ್.
ಎಸ್ಪಿಬಿ ತಮಿಳು, ತೆಲುಗಿನಲ್ಲಿ ಒಂದೇ ದಿನದಲ್ಲಿ 19 ಗೀತೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಅದೇ ರೀತಿ ಕನ್ನಡದಲ್ಲೂ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ನಿರ್ದೇಶನದಲ್ಲಿ 21 ಹಾಡುಗಳನ್ನು ಬೆಳ್ಳಗ್ಗೆ 9 ರಿಂದ ರಾತ್ರಿ 9 ವರೆಗೂ ಹಾಡಿ ದಾಖಲೆ ಮಾಡಿದ್ದಾರೆ.
ಕನ್ನಡದೊಂದಿಗೆ ಎಸ್ಪಿಬಿ ನಂಟು ಒಟ್ಟಿನಲ್ಲಿ ಆಂಧ್ರದಲ್ಲಿ ಹುಟ್ಟಿ ಕನ್ನಡ ಕಲಿತು ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವನಾಗಿ ಎಸ್ಪಿಬಿ ಉತ್ತುಂಗದ ಶಿಖರಕ್ಕೆ ಏರಿದ್ದು ದೊಡ್ಡ ಸಾಧನೆಯೇ ಸರಿ. ಸಿನಿಮಾ ಹಾಡುಗಳು ಹಾಗೂ ಭಕ್ತಿಗೀತೆಗಳನ್ನು ಸೇರಿ ಇತರ ಭಾಷೆಗಳಿಗಿಂತ ಕನ್ನಡದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಬಾಲು.