ಕರ್ನಾಟಕ

karnataka

ETV Bharat / sitara

ಗಾನ ಗಂಧರ್ವ ಎಸ್​​ಪಿ ಬಾಲಸುಬ್ರಹ್ಮಣ್ಯಂ ಪ್ರಥಮ ಪುಣ್ಯಸ್ಮರಣೆ - sp balasubramaniam

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ..ಅಂದ್ರೆ ಎಸ್​ಪಿಬಿ.. ಈ ಹೆಸರು ಕೇಳಿದರೆ ಸಾಕು ಗಂಧರ್ವ ಲೋಕವೇ ನಮ್ಮ ಮುಂದೆ ಬಂದಂತಾಗುತ್ತದೆ. ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಆಗಿದೆ. ಇಂದು ಅವರ ಪ್ರಥಮ ಪುಣ್ಯಸ್ಮರಣೆಯ ದಿನ.

sp balasubramaniam first death anniversary
ಎಸ್​​ಪಿ ಬಾಲಸುಬ್ರಹ್ಮಣ್ಯಂ ಪ್ರಥಮ ಪುಣ್ಯಸ್ಮರಣೆ

By

Published : Sep 25, 2021, 8:58 AM IST

Updated : Sep 25, 2021, 9:49 AM IST

ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದ್ದು, ಅವರ ಪ್ರಥಮ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ.

ಎಸ್​​ಪಿಬಿ ತಮ್ಮ 74 ವಯಸ್ಸಿನಲ್ಲಿ(15-09-2020) ಇಹಲೋಕ ತ್ಯಜಿಸಿದರು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಕಳೆದ ವರ್ಷ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅವರಿಗೆ ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿತ್ತು. ಆದರೂ ಗಾನ ಗಂಧರ್ವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕದ ಯಾತ್ರೆ ಮುಗಿಸಿದರು.

ಎಸ್​​ಪಿ ಬಾಲಸುಬ್ರಹ್ಮಣ್ಯಂ

ಎಸ್​ಪಿಬಿ ಸಾಧನೆ:

ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್​ಪಿಬಿ ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಸುಮಾರು 25 ಬಾರಿ ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್, ನಟ, ಕಂಠದಾನ ಕಲಾವಿದ, ನಿರ್ಮಾಪಕ ಹೀಗೆ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಮಾಡಿರುವ ಸಾಧನೆಗಳಿಗೆ ಲಭಿಸಿರುವ ಗೌರವಗಳು ಅನೇಕ.

ಗಾಯನದ ಜೊತೆಗೆ ನಟನೆಗೂ ಸೈ:

ಎಸ್​ಪಿ ಬಾಲಸುಬ್ರಮಣ್ಯಂ ಅವರು ಗಾಯನದ ಜೊತೆಗೆ ನಟನೆಯಲ್ಲೂ ಹೆಚ್ಚು ಆಸಕ್ತಿ ತೋರಿದ್ದರು. ಎಸ್​ಪಿಬಿ ಅವರು ವಿವಿಧ ಭಾಷೆಯ 72 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಭಾರತ ಚಿತ್ರರಂಗದಲ್ಲಿ ಈ ಪರಿ ಸಿನಿಮಾದಲ್ಲಿ ನಟಿಸಿದ ಮತ್ತೊಬ್ಬ ಗಾಯಕರಿಲ್ಲ. ನಟನೆಯ ಜೊತೆಗೆ ಕಂಠದಾನ ಕಲಾವಿದರಾಗಿಯೂ ಎಸ್​ಪಿಬಿ ಗುರುತಿಸಿಕೊಂಡಿದ್ದು ವಿಶೇಷ.

ಎಸ್​​ಪಿ ಬಾಲಸುಬ್ರಹ್ಮಣ್ಯಂ

ಎಸ್​ಪಿಬಿ ಮತ್ತು ಕನ್ನಡ:

ಎಸ್​ಪಿಬಿ ಅವರು ಕಳೆದ ಐದು ದಶಕಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಗಾಯನ ಗಂಗೆಯನ್ನು ದೇಶದುದ್ದಗಲಕ್ಕೂ ಹರಿಸಿದ್ದಾರೆ. ಸಿನಿರಂಗದ ನೂರಾರು ಗಾಯನಾತ್ಮಗಳಲ್ಲಿ 16 ಭಾಷೆಗಳ 41 ಸಾವಿರಕ್ಕೂ ಅಧಿಕ ಹಾಡುಗಳ ಮೂಲಕ ಭಾರತದ ಅನರ್ಘ್ಯ ರತ್ನವಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ 21 ಹಾಡುಗಳನ್ನು ಒಂದೇ ದಿನದಲ್ಲಿ ಹಾಡಿದ್ದರು. ಅದೇ ರೀತಿ ಹಿಂದಿಯಲ್ಲಿ 16, ತಮಿಳಿನಲ್ಲಿ 19 ಹಾಡುಗಳನ್ನು ಮತ್ತೊಂದು ದಿನದಲ್ಲಿ ಹಾಡಿದ್ದಾರೆ. ನಾಲ್ಕು ರಾಜ್ಯಗಳಿಂದ ರಾಷ್ಟ್ರ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಎಸ್​ಪಿಬಿ.

1966ರಲ್ಲಿ 'ನಕ್ಕರೆ ಅದೇ ಸ್ವರ್ಗ' ಚಿತ್ರದ ಮೂಲಕ ಕನ್ನಡ ಚಿತ್ರಗಳಲ್ಲಿ ಹಾಡಲು ಆರಂಭಿಸಿದರು. ಆರಂಭದಲ್ಲಿ ಎಸ್​​ಪಿಬಿ ಅವರಿಗೆ ಕನ್ನಡ ಬರದಿದ್ದರೂ ತಾನು ಕನ್ನಡಿಗನೇ ಎಂಬಂತೆ ಲೀಲಾಜಾಲವಾಗಿ ಹಾಡುಗಳನ್ನು ಹಾಡಿ, ಕನ್ನಡಿಗರ ಮನ ಗೆದ್ದಿದ್ದರು.

ಎಸ್​​ಪಿ ಬಾಲಸುಬ್ರಹ್ಮಣ್ಯಂ

ಎಲ್ಲ ಭಾಷೆಯಲ್ಲೂ ಹಾಡಿ ಸೈ ಎನಿಸಿಕೊಂಡ್ರು ಎಸ್​ಪಿಬಿ:

1981 ಫೆಬ್ರವರಿ 8ರಂದು ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ಉಪೇಂದ್ರ ಕುಮಾರ್ ಸಂಗೀತ ನಿರ್ದೇಶನದಲ್ಲಿ, ಬೆಳಗ್ಗೆ 9 ರಿಂದ ರಾತ್ರಿ 9ವರೆಗೆ 21 ಹಾಡು ರೆಕಾರ್ಡ್ ಮಾಡಿದ್ದರು. ನಂತರ ಮತ್ತೊಂದು ದಿನ ತಮಿಳಿನಲ್ಲಿ 19 ಹಾಡು, ಹಿಂದಿ ಭಾಷೆಯಲ್ಲಿ ಒಂದೇ ದಿನ 16 ಹಾಡು ಹಾಡಿ, ಯಾವ ಗಾಯಕರೂ ಮಾಡದ ದಾಖಲೆ ಮಾಡಿದರು. ಆ ಸಮಯದಲ್ಲಿ ತೆಲುಗಿನಲ್ಲಿ ಘಂಟಸಾಲ, ತಮಿಳಿನಲ್ಲಿ ಟಿ ಎಂ ಸೌಂದರ್ ರಾಜನ್, ಕನ್ನಡದಲ್ಲಿ ಪಿ ಬಿ ಶ್ರೀನಿವಾಸ್ ಬಹಳ ಖ್ಯಾತರಾಗಿದ್ದರು. ಆದರೆ, ಎಸ್ ಪಿ ಬಾಲಸುಬ್ರಮಣ್ಯಂ ಎಲ್ಲ ಭಾಷೆಯಲ್ಲೂ ಹಾಡಿ ಸೈ ಎನಿಸಿಕೊಂಡರು.

ಎಸ್​​ಪಿ ಬಾಲಸುಬ್ರಹ್ಮಣ್ಯಂ

ಕನ್ನಡ ನಟರ ಧ್ವನಿಯಾಗಿದ್ದರು ಎಸ್​ಪಿಬಿ

ಕರ್ನಾಟಕ ರತ್ನ ಡಾ. ರಾಜ್​ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬಲ್ ಸ್ಟಾರ್ ಅಂಬರೀಶ್, ಅನಂತ್ ನಾಗ್, ಶ್ರೀನಾಥ್, ತಮಿಳಿನಲ್ಲಿ ಎಂಜಿಆರ್, ಶಿವಾಜಿ ಗಣೇಶನ್, ಟಾಲಿವುಡ್​ನಲ್ಲಿ ಎನ್ ಟಿ ರಾಮರಾವ್, ಅಕ್ಕಿನೇನಿ ಅವರಂತ ದಿಗ್ಗಜ ನಟರಿಗೆ ಎಸ್​​​ಪಿಬಿ ಧ್ವನಿಯಾಗಿದ್ದರು.

ಎಸ್​ಪಿಬಿ ಭೌತಿಕವಾಗಿ ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಆದರ್ಶ ಜೀವನ, ಮೇರು ವ್ಯಕ್ತಿತ್ವ, ಅವರ ಕಂಠಸಿರಿಯಿಂದ ಹೊರಹೊಮ್ಮಿದ ಆ ಅದ್ಭುತ ಹಾಡುಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

Last Updated : Sep 25, 2021, 9:49 AM IST

ABOUT THE AUTHOR

...view details