ಕೊರೊನಾ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಕೊರೊನಾ ಪಾಸಿಟಿವ್ ದೃಢವಾಗಿದ್ದು ಸಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರಿಗೂ ಕೊರೊನಾ ಇರುವುದು ದೃಢವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್.ಪಿ. ಬಾಲಸುಬ್ರಮಣ್ಯಂ ತಮಗೆ ಕೊರೊನಾ ಸೋಂಕು ತಗುಲಿರುವ ವಿಚಾರವನ್ನು ಸ್ವತ: ಎಸ್.ಪಿ. ಬಾಲಸುಬ್ರಮಣ್ಯಂ ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಅವರು, " 2-3 ದಿನಗಳಿಂದ ನನಗೆ ಶೀತ ಹಾಗೂ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು. ಆದರೆ ನಾನು ಇದನ್ನು ಕಡೆಗಣಿಸದೆ ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿದಾಗ ಅಲ್ಲಿ ನನಗೆ ಕೊರೊನಾ ಲಕ್ಷಣಗಳು ಇರುವುದು ಕಂಡು ಬಂತು".
"ನೀವು ಮನೆಯಲ್ಲೇ ಕ್ವಾರಂಟೈನ್ನಲ್ಲಿದ್ದು ಚಿಕಿತ್ಸೆ ಪಡೆಯಬಹುದು ಎಂದು ವೈದ್ಯರು ಹೇಳಿದರು. ಆದರೆ ನನ್ನ ಕುಟುಂಬದವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನನ್ನು ಇಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಯಾರೂ ಭಯ ಪಡಬೇಕಾಗಿಲ್ಲ. ಇನ್ನು 2 ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದೇನೆ. ನನ್ನ ಆರೋಗ್ಯ ವಿಚಾರಿಸಲು ಹಲವರು ಕರೆ ಮಾಡುತ್ತಿದ್ದಾರೆ. ಆದರೆ ನಿಮ್ಮ ಕರೆಗಳನ್ನು ಸ್ವೀಕರಿಸಲಾಗುತ್ತಿಲ್ಲ. ನನಗೆ ವಿಶ್ರಾಂತಿಯ ಅಗತ್ಯವಿದೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು" ಎಂದು ಎಸ್.ಪಿ. ಬಾಲಸುಬ್ರಮಣ್ಯಂ ತಿಳಿಸಿದ್ದಾರೆ.
ವಿಚಾರ ತಿಳಿದ ಎಸ್.ಪಿ. ಬಾಲಸುಬ್ರಮಣ್ಯಂ ಅಭಿಮಾನಿಗಳು, ಸ್ನೇಹಿತರು, ಗಣ್ಯರು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.